ಬೆಂಗಳೂರು, ಮಾ.23- ರಾಜ್ಯಸಭೆಯ ನಾಲ್ಕೂ ಸ್ಥಾನಗಳಿಗೆ ಇಂದು ನಡೆದ ಚುನಾವಣೆ ವೇಳೆ ಹಲವು ಗೊಂದಲ, ಸಂಘರ್ಷಗಳು ನಡೆದು ಕುತೂಹಲಕ್ಕೆ ಕಾರಣವಾಯಿತು.
ಒಟ್ಟಾರೆ ಚುನಾವಣೆ ಶಾಂತಿಯುತವಾಗಿ ನಡೆದರೂ ಕಾನೂನಿನ ಗೊಂದಲ, ನಿಯಮಗಳ ಸಂಘರ್ಷ, ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳ ನಡುವೆ ನಡೆದ ಚುನಾವಣೆಯಲ್ಲಿ ಬಹುತೇಕ ಪಕ್ಷೇತರರು, ಜೆಡಿಎಸ್‍ನ ಏಳು ಮಂದಿ ಬಂಡಾಯ ಶಾಸಕರು ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದು ಕಂಡುಬಂತು.
ಬಿಜೆಪಿ ಅಭ್ಯರ್ಥಿಗೆ ನಿಗದಿಗಿಂತ ಒಂದೆರಡು ಹೆಚ್ಚು ಮತಗಳು ಲಭ್ಯವಾಗಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್‍ನ ಮೂವರು ಅಭ್ಯರ್ಥಿಗಳ ಗೆಲುವು ಖಚಿತವಾದಂತಿದೆ.
ಈ ಮತದಾನದ ಸಂದರ್ಭದಲ್ಲಿ ಹಿರಿಯ ಸಚಿವರಾದ ಕಾಗೋಡು ತಿಮ್ಮಪ್ಪ, ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಮತಪತ್ರದಲ್ಲಿ ತಪ್ಪು ಗುರು ಮಾಡಿದ್ದು ಗೊಂದಲಕ್ಕೆ ಕಾರಣವಾಯಿತು.
ತಕ್ಷಣವೇ ಮತದಾನದ ಅಂತಿಮ ಹಂತದಲ್ಲಿ ತಮ್ಮ ತಪ್ಪನ್ನು ಗುರುತಿಸಿಕೊಂಡ ಈ ಇಬ್ಬರೂ ಚುನಾವಣಾಧಿಕಾರಿ ಬಳಿ ಬದಲಿ ಮತಪತ್ರ ಪಡೆದು ಮತ್ತೊಮ್ಮೆ ಮತ ಚಲಾಯಿಸಿದ್ದು ಜೆಡಿಎಸ್‍ನ ಆಕ್ರೋಶಕ್ಕೆ ಕಾರಣವಾಯಿತು.
ಎರಡು ಮತಪತ್ರಗಳನ್ನು ನೀಡಿರುವುದು ಕಾನೂನು ಬಾಹಿರ ಎಂದು ಆರೋಪಿಸಿದ ಜೆಡಿಎಸ್ ಮತಗಟ್ಟೆಯಲ್ಲೇ ಪ್ರತಿಭಟನೆ ಮಾಡಲು ಮುಂದಾಯಿತು.
ಆದರೆ, ಇದಕ್ಕೆ ಚುನಾವಣಾ ಆಯೋಗ ಅವಕಾಶ ನೀಡಲಿಲ್ಲ. ಮತ್ತೊಂದು ಕಡೆ ನ್ಯಾಯಾಲಯದ ಮೊರೆ ಹೋಗುವ ಪ್ರಯತ್ನವನ್ನು ಕೂಡ ಜೆಡಿಎಸ್ ನಡೆಸಿತು. ಆದರೆ, ಯಾವುದೂ ಫಲ ನೀಡದೆ ಇದ್ದಾಗ ಅಂತಿಮ ಹಂತದಲ್ಲಿ ರಾಜ್ಯಸಭೆಯ ಮತದಾನ ಬಹಿಷ್ಕರಿಸುವ ನಿರ್ಧಾರಕ್ಕೆ ಜೆಡಿಎಸ್ ಬಂದಿತು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಗೆಲುವಿನ ದಾರಿ ಸುಗಮವಾಗಿದೆ. ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅಭ್ಯರ್ಥಿಗಳಿಗೆ ಹಂಚಿಕೆ ಮಾಡಿರುವ ನಿಗದಿತ ಮತಗಳು ಚಲಾವಣೆಯಾಗಿವೆ. ಬಿಜೆಪಿ ಅಭ್ಯರ್ಥಿಗೆ ನಿರೀಕ್ಷೆಗಿಂತ ಒಂದೆರಡು ಮತಗಳು ಹೆಚ್ಚಾಗಿಯೇ ಚಲಾವಣೆಯಾಗಿವೆ.
ಒಟ್ಟಾರೆ ಚುನಾವಣಾ ಪ್ರಕ್ರಿಯೆಯನ್ನು ಜೆಡಿಎಸ್ ಅಕ್ರಮ ಎಂದು ಟೀಕಿಸಿದ್ದು, ಇದನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ.
ಎರಡೆರಡು ಬಾರಿ ಮತ ಚಲಾಯಿಸಿದ ಕಾಗೋಡು ಹಾಗೂ ಚಿಂಚನಸೂರು ಮತಗಳನ್ನು ರದ್ದುಗೊಳಿಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ಎರಡು ಬಾರಿ ಮತ ಚಲಾವಣೆ ಮಾಡುವುದು ನಿಯಮ ಬಾಹಿರ ಎಂದು ಚುನಾವಣಾ ಆಯೋಗವೇ ಒಪ್ಪಿಕೊಂಡಿದೆ. ಆದರೆ, ಚುನಾವಣೆ ಮುಂದೂಡಲು ಮಾತ್ರ ನಿರಾಕರಿಸುತ್ತಿದೆ. ಹೀಗಾಗಿ ಚುನಾವಣಾ ವ್ಯವಸ್ಥೆಯೇ ಹಳ್ಳ ಹಿಡಿದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಈ ಎಲ್ಲ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಮತ್ತಿತರ ಕಾಂಗ್ರೆಸ್ ನಾಯಕರು, ಸೋಲಿನ ಹತಾಶೆಯಿಂದ ಜೆಡಿಎಸ್ ಈ ರೀತಿ ಸುಳ್ಳು ಆರೋಪ ಮಾಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಅಹಿತಕರವಾದ ಯಾವುದೇ ಘಟನೆಗಳು ನಡೆಯದೆ ಇದ್ದರೂ ಡಬಲ್ ವೋಟಿನ ಗೊಂದಲ ಕಾನೂನು ಸಂಘರ್ಷಕ್ಕೆ ನಾಂದಿ ಹಾಡಿದೆ. ಚುನಾವಣಾ ಆಯೋಗ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.