ಬೀದರ: ಮಾ:23 – ಹಸಿವುಮುಕ್ತ ಕರ್ನಾಟಕದ ಭಾಗವಾಗಿ ರಾಜ್ಯ ಸರ್ಕಾರ ನಗರದಲ್ಲಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‍ಗಳಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಮ್ ಖಾನ್ ತಿಳಿಸಿದ್ದಾರೆ.
ಜನಸಾಮಾನ್ಯರ ಅನುಕೂಲಕ್ಕಾಗಿ ನಗರದ ಮೂರು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್‍ಗಳನ್ನು ಆರಂಭಿಸಲಾಗಿದೆ. ನಗರಸಭೆ ಕಚೇರಿ, ಜಿಲ್ಲಾ ಆಸ್ಪತ್ರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವ್ಯಾಪ್ತಿಯಲ್ಲಿ ಪ್ರಾರಂಭಿಸಿರುವ ಕ್ಯಾಂಟೀನ್‍ಗಳು ಗುಣಮಟ್ಟದ ಊಟ, ಉಪಾಹಾರ ಹಾಗೂ ಉತ್ತಮ ಸೇವೆಯ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿವೆ ಎಂದು ಹೇಳಿದ್ದಾರೆ.
ಕೂಲಿ ಕಾರ್ಮಿಕರು, ಹಮಾಲರು, ರೈತರು, ರೋಗಿಗಳು, ಬಡವರಿಗೆ ಸಹಾಯಹಸ್ತ ಚಾಚಲು ಕ್ಯಾಂಟೀನ್‍ಗಳಲ್ಲಿ 5 ರೂಪಾಯಿಗೆ ಉಪಾಹಾರ ಹಾಗೂ 10 ರೂಪಾಯಿಗೆ ಊಟ ಕೊಡಲಾಗುತ್ತಿದೆ. ಮೂರೂ ಕ್ಯಾಂಟೀನ್‍ಗಳಲ್ಲಿ ನಿತ್ಯ ನೂರಾರು ಜನ ಖುಷಿ ಖುಷಿಯಿಂದ ಊಟ, ಉಪಾಹಾರ ಸವಿಯುತ್ತಿದ್ದಾರೆ. ಬಡವರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಅತ್ಯಲ್ಪ ಬೆಲೆಯಲ್ಲಿ ಊಟ ಹಾಗೂ ಉಪಹಾರ ನೀಡುತ್ತಿರುವ ಸರ್ಕಾರದ ಕ್ರಮವನ್ನು ಮುಕ್ತಕಂಠದಿಂದ ಪ್ರಶಂಶಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕ್ಯಾಂಟೀನ್‍ಗೆ ಬರುವ ಎಲ್ಲರಿಗೂ ಉಪಾಹಾರ ಹಾಗೂ ಊಟ ದೊರೆಯುವಂತೆ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆ ಕೊಡಲಾಗಿದೆ ಎಂದು ಹೇಳಿದ್ದಾರೆ.
ಹೆಚ್ಚು ಅನುದಾನ ನೀಡಿದ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚು ಅನುದಾನ ನೀಡುವ ಮೂಲಕ ಬೀದರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕರ ಆಸ್ಪತ್ರೆಗೆ 95 ಕೋಟಿ ರೂ., ನಿರಂತರ ನೀರು ಯೋಜನೆಗೆ 42.92 ಕೋಟಿ ರೂ,, ಒಳಚರಂಡಿ ಯೋಜನೆಗೆ 58.81 ಕೋಟಿ ರೂ., ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ಉಗ್ರಾಣ ನಿಗಮದ ವತಿಯಿಂದ 41,800 ಎಂ.ಟಿ. ಸಾಮರ್ಥ್ಯದ ಬೃಹತ್ ಗೋದಾಮು ನಿರ್ಮಾಣಕ್ಕೆ 29.76 ಕೋಟಿ ರೂ., 17 ಕಿ.ಮೀ. ನಗರ ವರ್ತುಲ ರಸ್ತೆಗೆ 47 ಕೋಟಿ ರೂ., ನಗರದ ಆಂತರಿಕ ರಸ್ತೆಗಳ ನಿರ್ಮಾಣಕ್ಕೆ 9 ಕೋಟಿ ರೂ., 20 ಕಡೆಗಳಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ 1.30 ಕೋಟಿ ರೂ., 100 ಹಾಸಿಗೆಗಳ ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ 20 ಕೋಟಿ ರೂ., ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣಕ್ಕೆ 48 ಕೋಟಿ ರೂ., ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ 5 ಕೋಟಿ ರೂ., ನೆಹರೂ ಕ್ರೀಡಾಂಗಣಕ್ಕೆ 4.56 ಕೋಟಿ ಅನುದಾನ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.
ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಜನೋಪಯೋಗಿ ಕಾರ್ಯಗಳನ್ನು ಶರವೇಗದಲ್ಲಿ ಪೂರ್ಣಗೊಳಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನನಗೆ ದೊರೆತ ಅಲ್ಪ ಅವಧಿಯಲ್ಲೇ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನೂ ಹಲವು ಕನಸುಗಳನ್ನು ಹೊತ್ತಿಕೊಂಡಿದ್ದೇನೆ. ಮತದಾರರು ಇನ್ನೊಮ್ಮೆ ಅವಕಾಶ ನೀಡಿದರೆ ಅವುಗಳನ್ನು ಪೂರ್ಣಗೊಳಿಸಲಿದ್ದೇನೆ ಎಂದು ಹೇಳಿದ್ದಾರೆ.