ಬೆಂಗಳೂರು,ಮಾ.23- ಇನ್ನು ನಮ್ಮದು ವೀರಶೈವ ಮಹಾಸಭಾ ಅಲ್ಲ, ಲಿಂಗಾಯತ ಮಹಾಸಭಾ. ಹೀಗಾಗಿ ವೀರಶೈವ ಮಹಾಸಭಾ ನಮಗೆ ಸುಪ್ರೀಂ ಅಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು,ನಾವು ಏನೇ ಮಾಡಬೇಕಿದ್ದರೂ ವೀರಶೈವ ಮಹಾಸಭಾ ಮಾತನ್ನು ಕೇಳಿ ಮಾಡಬೇಕಿಲ್ಲ.ಯಾಕೆಂದರೆ ನಮ್ಮದು ಲಿಂಗಾಯತ ಮಹಾಸಭಾ.ಅದರ ಅಧ್ಯಕ್ಷರು ಬಸವರಾಜ ಹೊರಟ್ಟಿ ಎಂದು ಸ್ಪಷ್ಟ ಪಡಿಸಿದರು.
ಆ ಮೂಲಕ ವೀರಶೈವ-ಲಿಂಗಾಯತ ಬೇರೆ ಬೇರೆ ಧರ್ಮಗಳು ಎಂಬ ಮಾತು ಮತ್ತಷ್ಟು ಪ್ರಬಲವಾಗತೊಡಗಿದ್ದು ಈ ಬೆಳವಣಿಗೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ನಾವು ವೀರಶೈವರಾದರೆ ವೀರಶೈವ ಮಹಾಸಭಾ ಮಾತು ಕೇಳಬೇಕು.ಆದರೆ ನಾವು ವೀರಶೈವರೂ ಅಲ್ಲ,ವೀರಶೈವ ಮಹಾಸಭಾಕ್ಕೂ ನಮಗೂ ಸಂಬಂಧವೇ ಇಲ್ಲ ಎಂದು ಅವರು ವಿವರ ನೀಡಿದರು.
ನಾವು ಲಿಂಗಾಯತರು. ನಮಗೆ ಲಿಂಗಾಯತ ಮಹಾಸಭಾ ಸುಪ್ರೀಂ. ಇನ್ನೇನಿದ್ದರೂ ಲಿಂಗಾಯತ ಮಹಾಸಭಾ ಏನು ಹೇಳುತ್ತದೋ?ಅದನ್ನು ಕೇಳುತ್ತೇವೆ. ವೀರಶೈವ ಮಹಾಸಭಾ ಹೇಳಿದಂತಲ್ಲ ಎಂದರು.
ನಮಗೆ ನಮ್ಮದೇ ದಾರಿ ಇದ್ದಾಗ ಬೇರೆ ದಾರಿಯಲ್ಲಿ ಏಕೆ ಹೋಗುತ್ತೇವೆ?ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು,ಈ ಕುರಿತು ಹೆಚ್ಚು ಚರ್ಚೆಯ ಅಗತ್ಯವೇನಿಲ್ಲ ಎಂದರು.