ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ: ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿಯಿಂದ ವಂZನೆ: ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಬಹಿರಂಗ

ಬೆಂಗಳೂರು, ಮಾ.23- ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ. ಬರೋಬ್ಬರಿ 50 ಕೋಟಿಯಷ್ಟು ಹಣವನ್ನು ಬಿಬಿಎಂಪಿಗೆ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ವಂಚಿಸಿರುವುದನ್ನು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಎಳೆ ಎಳೆಯಾಗಿ ಬಹಿರಂಗಪಡಿಸಿದರು.

ಕಳೆದ ಪಾಲಿಕೆ ಸಭೆಯಲ್ಲಿ ಪಾರ್ಟ್-1 ಅಕ್ರಮವನ್ನು ಬಹಿರಂಗಪಡಿಸಿದ ಅವರು ಇಂದು ಪಾರ್ಟ್-2 ಅಕ್ರಮವನ್ನು ಬಿಡಿಸಿಟ್ಟರು.

ಅತ್ತೆ ಆಸ್ತಿಯನ್ನು ಅಳಿಯ ದಾನ ಮಾಡಿದ ಎನ್ನುವಂತೆ ಯಾರದೋ ಆಸ್ತಿಯನ್ನು ಯಾರೋ ಅಡವಿಟ್ಟು ದುಡ್ಡು ಪಡೆದಿರುವುದನ್ನು ದಾಖಲೆ ಸಮೇತ ಪದ್ಮನಾಭರೆಡ್ಡಿ ಸಭೆಯಲ್ಲಿಂದು ಹೇಳಿದರು.

ನೈಸ್ ಸಂಸ್ಥೆಗೆ ಪೆರಿಪೆರಲ್ ರಸ್ತೆ ನಿರ್ಮಾಣ ಮಾಡಲು 2173 ಎಕರೆ ಭೂಮಿಯನ್ನು ಒಂದು ಎಕರೆಗೆ ಒಂದು ರೂ.ನಂತೆ ಸರ್ಕಾರ ನೀಡಿತ್ತು. ಕೆಲವು ಭಾಗಗಳಲ್ಲಿ ರಸ್ತೆ ನಿರ್ಮಿಸಿದ ಸಂಸ್ಥೆ ಈಗಾಗಲೇ ಟೋಲ್ ಸಂಗ್ರಹ ಮಾಡುತ್ತಿದೆ. ಅದೇ ನೈಸ್ ಸಂಸ್ಥೆ ಹೊಸಕೆರೆಹಳ್ಳಿ ಬಳಿ ಲಿಂಕ್‍ರೋಡ್ ನಿರ್ಮಾಣ ಮಾಡುತ್ತಿದೆ. ಇದಕ್ಕೆ ಸಂಬಂಧಪಟ್ಟ ಜಾಗವನ್ನು ಬಿಬಿಎಂಪಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.

55,180 ಅಡಿ ಜಾಗ ಸ್ವಾಧೀನಪಡಿಸಿಕೊಳ್ಳಲು ಮುಂದಾದ ಬಿಬಿಎಂಪಿ ಇದಕ್ಕೆ ಪರ್ಯಾಯವಾಗಿ 83,640 ಅಡಿ ಟಿಡಿಆರ್ ಕೊಟ್ಟಿದೆ. ಈ ಟಿಡಿಆರ್‍ಅನ್ನು ನೈಸ್ ಸಂಸ್ಥೆ ಖೇಣಿ ರಾಮ್‍ಸನ್ ಸಂಸ್ಥೆಗೆ ಮಾರಾಟ ಮಾಡಿದ್ದಾರೆ.

ರಾಮ್‍ಸನ್ ಸಂಸ್ಥೆ ವಾಸ್ವಾನಿ ಎಂಬ ಸಂಸ್ಥೆಗೆ ಮಾರಾಟ ಮಾಡಿದೆ. ವಾಸ್ವಾನಿ ಸಂಸ್ಥೆ ಖಾತೆ ಮಾಡಿಸಿಕೊಳ್ಳಲು ಹೋದಾಗ ವಂಚನೆ ಬಯಲಾಗಿದೆ. ಇದರಿಂದ ಪಾಲಿಕೆಗೆ ಸುಮಾರು 50 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಪದ್ಮನಾಭರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಕಡತವೇ ನಾಪತ್ತೆಯಾಗಿದೆ.

ಇದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರವ್ಯಾಪ್ತಿಯಲ್ಲಿ ಎಂತಹ ಪವರ್‍ಫುಲ್ ಕೆಲಸಗಳು ನಡೆಯುತ್ತವೆ ಎಂಬುದಕ್ಕೆ ಇದು ತಾಜಾ ಉದಾಹರಣೆ ಎಂದು ಪದ್ಮನಾಭರೆಡ್ಡಿ ಹೇಳಿದರು.

ಇಷ್ಟು ಅನ್ಯಾಯವಾಗಲು ಬಿಡುವುದಿಲ್ಲ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು. ಯಾವುದೇ ಬಂಡವಾಳವಿಲ್ಲದೆ ಕೋಟ್ಯಂತರ ರೂ.ಗಳನ್ನು ನೈಸ್ ಸಂಸ್ಥೆ ಮಾಡಿಕೊಂಡಿರುವುದಲ್ಲದೆ ಬಿಬಿಎಂಪಿಗೆ ವಂಚನೆ ಮಾಡಿದೆ ಎಂದು ಆರೋಪ ಮಾಡಿದ ಅವರು, ಈ ಬಗ್ಗೆ ತನಿಖೆಗೆ ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ