ಬೆಂಗಳೂರು,ಮಾ.23- ಇಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಉಸ್ತುವಾರಿ ತೆಗೆದುಕೊಂಡು ಶಾಸಕರ ಮತದಾನ ಮಾಡಿಸುತ್ತಿದ್ದು ಕಂಡುಬಂತು.
ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ವ್ಯಾಪ್ತಿಯ ಶಾಸಕರಿಂದ ಮತದಾನ ಮಾಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡುತ್ತಿದ್ದರು.
ರುದ್ರಪ್ಪ ಲಮಾಣಿ, ಏನಪ್ಪ ನಿಮ್ಮ ಜಿಲ್ಲೆಯ ಎಲ್ಲ ಶಾಸಕರಿಂದ ಮತದಾನ ಮಾಡಿಸುವುದು ನಿನ್ನ ಜವಾಬ್ದಾರಿ ಎಂದು ಹೇಳಿದರು. ಅದೇ ರೀತಿ ಹಾಸನದ ಮಂಜು ಅವರಿಗೂ ಕೂಡ ಜ್ಞಾಪಿಸಿದರು.
ಎಲ್ಲ ಸಚಿವರಿಗೂ ಕೂಡ ನಿಮ್ಮ ನಿಮ್ಮ ವ್ಯಾಪ್ತಿಯ ಶಾಸಕರನ್ನು ಕರೆತಂದು ನಿಗದಿಪಡಿಸಿದಂತೆ ಮತದಾನ ಮಾಡಿಸಿ ಎಂದು ಹೇಳುತ್ತಿದ್ದರು. ಪಕ್ಷೇತರ ಶಾಸಕರ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡು ಪ್ರತಿಯೊಬ್ಬರೊಂದಿಗೆ ಅವರೇ ಖುದ್ದು ಮಾತನಾಡಿ ಮತದಾನಕ್ಕೆ ಮನವಿ ಮಾಡುತ್ತಿದ್ದರು.
ಏನಪ್ಪ ಕೊತ್ತನೂರು ಮಂಜು ಧರ್ಮಸ್ಥಳದ ಮಂಜುನಾಥ… ವೋಟ್ ಹಾಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉಪಹಾರ ಸೇವನೆಗೆ ಮುಂದಾದರು.
ಅಲ್ಲಿ ಇದದ್ದು ಕೇವಲ ಉಪ್ಪಿಟ್ಟು , ಕೇಸರಿ ಬಾತ್. ಯಾರ್ರೀ ದೋಸೆ, ಇಡ್ಲಿ ಏನೂ ಇಲ್ವಾ ಎಂದು ಕೇಳಿದಾಗ, ಪಕ್ಕದಲ್ಲಿದ್ದ ಪತ್ರಿಕಾ ಕಾರ್ಯದರ್ಶಿ ಪ್ರಭಾಕರ್ ಅವರು ಕಿವಿ ಹತ್ತಿರ ಬಂದು ಇಲ್ಲ ಸಾರ್. ಉಪ್ಪಿಟ್ಟು ಕೇಸರಿಬಾತು ಅಷ್ಟೇ ಎಂದಾಗ ಸ್ವಲ್ಪ ಮುಖ ಗಂಟು ಹಾಕಿಕೊಂಡರು. ಆಗ ಶಾಸಕರು ಏನ್ ಸಾರ್ ವೋಟ್ ಹಾಕೋಕೆ ಬಂದಿದ್ದೀವಿ ನಮಗೇನು ಇಲ್ವಾ, ಬರೀ ಉಪ್ಪಿಟ್ಟು, ಕೇಸರಿಬಾತು ಅಷ್ಟೇನಾ ಎಂದು ಗೊಣಗಿದರು. ಆಯ್ತು ತಗೋಳ್ರಪ್ಪ ಎಂದು ಮುಖ್ಯಮಂತ್ರಿಗಳು ಸಮಾಧಾನ ಮಾಡಿದರು.
ಉಪಹಾರ ಮುಗಿಸಿ ಸಿದ್ದರಾಮಯ್ಯ ನೇರ ಡಿ.ಕೆ.ಶಿವಕುಮಾರ್ ಅವರ ಕಚೇರಿಗೆ ತೆರಳಿದರು. ಅಲ್ಲಿ ಶಿವಕುಮಾರ್ ಮತ್ತು ಪರಮೇಶ್ವರ್ ಅವರೊಂದಿಗೆ ಯಾರ್ಯಾರಿಗೆ ಯಾವಯಾವ ಮತಗಳನ್ನು ನಿಗದಿಪಡಿಸಲಾಗಿದೆ ಎಂಬುದನ್ನು ಪರಿಶೀಲಿಸಿ ಅದರಂತೆ ನಡೆಯುತ್ತಿದೆಯೇ ಎಂಬುದನ್ನು ನೋಡತೊಡಗಿದರು.