ಆದಾಯ ತೆರಿಗೆ ಇಲಾಖೆ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಬೆಂಗಳೂರು, ಮಾ.22-ಚುನಾವಣೆ ಸಂದರ್ಭದಲ್ಲಿ ದುರುದ್ದೇಶ ಪೂರ್ವಕವಾಗಿ ಕಾಂಗ್ರೆಸ್ಸಿಗರ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಇಂದು ಆದಾಯ ತೆರಿಗೆ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿತು.

ಕೆಪಿಸಿಸಿ ಕಚೇರಿಯಿಂದ ನಗರದ ಆದಾಯ ತೆರಿಗೆ ಇಲಾಖೆ ಕಚೇರಿವರೆಗೂ ಬೃಹತ್ ರ್ಯಾಲಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನು ಇಂಡಿಯನ್ ಎಕ್ಸ್‍ಪ್ರೆಸ್ ವೃತ್ತದಲ್ಲಿರುವ ಸಂಚಾರ ನಿಯಂತ್ರಣಾ ಕೇಂದ್ರ ಕಚೇರಿ ಬಳಿ ಪೆÇಲೀಸರು ತಡೆದರು.

ಈ ಸಂದರ್ಭದಲ್ಲಿ ಕೆಲ ಕಾರ್ಯಕರ್ತರು ಬ್ಯಾರಿಕೇಡ್‍ಗಳನ್ನು ಭೇದಿಸಿ ಆದಾಯ ತೆರಿಗೆ ಕಚೇರಿಯತ್ತ ನುಗ್ಗುವ ಪ್ರಯತ್ನ ಮಾಡಿದರು. ಕೊನೆಗೆ ಕಾಂಗ್ರೆಸ್‍ನ ಹಿರಿಯ ನಾಯಕರ ಮಧ್ಯಪ್ರವೇಶದಿಂದ ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆ ಮುಂದುವರೆಸಿದರು.

ಪ್ರತಿಭಟನೆಯನ್ನು ಪೆÇಲೀಸರು ಸಂಚಾರ ನಿಯಂತ್ರಣ ಕೇಂದ್ರದ ಬಳಿ ತಡೆದಾಗ ಮುನ್ನುಗ್ಗಿ ಹೋದ ಎನ್‍ಎಸ್‍ಯುಐನ ದೀಪಕ್‍ಗೌಡ, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಎನ್‍ಎಸ್‍ಯುಐ ಅಧ್ಯಕ್ಷ ಅಖಿಲ್‍ಗೌಡ ಅವರುಗಳು ಆದಾಯ ತೆರಿಗೆ ಇಲಾಖೆ ಕಚೇರಿಯ ನಾಮಫಲಕಗಳಿಗೆ ಮಸಿ ಬಳಿದಿದ್ದಾರೆ. ತಕ್ಷಣವೇ ಪೆÇಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದರು.

ಕೆಪಿಸಿಸಿ ಕಚೇರಿ ಬಳಿ ಪ್ರತಿಭಟನೆಗೆ ಗೃಹ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಚುನಾವಣಾ ದೃಷ್ಟಿಯಿಂದ ಕಾಂಗ್ರೆಸ್‍ನ ಶಾಸಕರು, ಸಚಿವರು, ಮುಖಂಡರ ಮೇಲೆ ನಿರಂತರವಾಗಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಯುತ್ತಿದೆ. ಕೇಂದ್ರ ಸರ್ಕಾರ, ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ, ಸಿಬಿಐ, ಆರ್‍ಬಿಐ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ಮೂಲಕ ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಯುತ್ತಿದೆ. ಕೇವಲ ರಾಜಕೀಯ ಉದ್ದೇಶಕ್ಕಾಗಿ ಈ ದಾಳಿಗಳು ನಡೆಯುತ್ತಿವೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರನ್ನು ಹೆದರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಸುಳ್ಳು ಭರವಸೆಗಳ ನೀಡಿ ಬಿಜೆಪಿ ನೇತೃತ್ವದ ಕೇಮದ್ರ ಸರ್ಕಾರ ಯಾವುದೇ ಸಾಧನೆ ಮಾಡಿಲ್ಲ. ಹೀಗಾಗಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭಯದಿಂದ ಕಾಂಗ್ರೆಸ್ ಮುಖಂಡರ ಮೇಲೆ ಆದಾಯ ತೆರಿಗೆ ದಾಳಿ ಮಾಡಿಸುತ್ತಿದೆ. ಬಿಜೆಪಿಗೆ ನೇರವಾಗಿ ಚುನಾವಣೆ ಎದುರಿಸಿ ಗೆಲ್ಲುವ ತಾಕತ್ತಿಲ್ಲ. ಹಾಗಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ರಾಜಕೀಯವಾಗಿ ಸಾಂವಿಧಾನಿಕ ಸಂಸ್ಥೆಗಳು ಇಷ್ಟು ಕೀಳೂಮಟ್ಟಕ್ಕೆ ಇಳಿಯಬಾರದು. ನಿಮ್ಮ ಯಾವುದೇ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಹಿರಿಯ ನಾಯಕರಾದ ಪೆÇ್ರ.ಬಿ.ಕೆ.ಚಂದ್ರಶೇಖರ್, ಜಿಲ್ಲಾ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಶಾಸಕರಾದ ಎನ್.ಎ.ಹ್ಯಾರೀಸ್, ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಜಿ.ಶೇಖರ್, ರಾಜಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಿಯೋಗವೊಂದು ಆದಾಯ ತೆರಿಗೆ ಇಲಾಖೆ ಅಧಿಕಾರಿ ಪ್ರಸನ್ನಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಜೊತೆಗೆ ಕೇಂದ್ರ ಸರ್ಕಾರದ ನೇರ ತೆರಿಗೆ ಮಂಡಳಿ ಅಧ್ಯಕ್ಷರಿಗೂ ಪತ್ರ ಬರೆದು 13 ಅಂಶಗಳನ್ನು ಅವರ ಗಮನಕ್ಕೆ ತರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ