ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಬೆದರಿಕೆ: ದಿನೇಶ್‍ಗುಂಡೂರಾವ್ ಗಂಭೀರ ಆರೋಪ

ಬೆಂಗಳೂರು, ಮಾ.22-ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಕಾಂಗ್ರೆಸ್ ನಾಯಕರ ತೇಜೋವಧೆ ಮಾಡುವ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆದರೆ ಇನ್ನಷ್ಟು ತೊಂದರೆ ಕೊಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆದಾಯ ತೆರಿಗೆ ಕಚೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕಾಗಿ ಆದಾಯ ತೆರಿಗೆ ಇಲಾಖೆ ದುರುಪಯೋಗಪಡಿಸಿ ಕೊಳ್ಳುತ್ತಿದೆ. ಕಾಂಗ್ರೆಸ್ ಮುಖಂಡರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿ ಬೆದರಿಸಲಾಗುತ್ತಿದೆ.

ದಾಳಿ ಮಾಡಿದ ಬೆನ್ನಲ್ಲೇ ಕೋಟಿಗಟ್ಟಲೆ ಹಣ ದೊರೆತಿದೆ ಎಂಬ ಮಾತನ್ನು ಸೋರಿಕೆ ಮಾಡಲಾಗುತ್ತಿದೆ. ಅದು ಸತ್ಯವೋ, ಸುಳ್ಳೋ ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದೆ ಗೊಂದಲದಲ್ಲಿ ಮುಳುಗುತ್ತಿದ್ದಾರೆ. ಇನ್ನು ದಾಳಿಗೆ ಒಳಗಾದವರನ್ನು ಕೆಲ ಧಿಕಾರಿಗಳು ಬೆದರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತೊರೆಯಬೇಕು, ಇಲ್ಲವಾದರೆ ಬೇರೆ ರೀತಿಯ ತೊಂದರೆ ಎದುರಿಸಬೇಕಾಗುತ್ತದೆ ಎಂಬುದನ್ನು ಬೆದರಿಕೆ ಹಾಕಲಾಗಿದೆ.

ಕಳೆದ ಒಂದೂವರೆ ವರ್ಷದಿಂದೀಚೆಗೆ ಸುಮಾರು ನೂರಕ್ಕೂ ಹೆಚ್ಚು ಜನ ಕಾಂಗ್ರೆಸ್ ಮುಂಖಡರ ಮೇಲೆ ದಾಳಿ ನಡೆಸಲಾಗಿದೆ. ಗುಜರಾತ್ ರಾಜ್ಯಸಭೆ ಚುನಾವಣೆ ವೇಳೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಆನಂತರ ಶಾಸಕರಾದ ಎಂ.ಟಿ.ಬಿ.ನಾಗರಾಜ್, ರಘುಆಚಾರ್ ಮತ್ತಿತರ ಮೇಲೆ ದಾಳಿ ನಡೆದಿದೆ. ಬಿಜೆಪಿಯ ಈಶ್ವರಪ್ಪ, ಯಡಿಯೂರಪ್ಪ ಅವರ ಮೇಲೆ ದೂರುಗಳಿದ್ದರೂ ಯಾವುದೇ ಕಾರ್ಯಾಚರಣೆ ನಡೆಸಿಲ್ಲ ಏಕೆ ಎಂದು ಪ್ರಶ್ನಿಸಿದರು.

ಚುನಾವಣೆ ಕಾಲಕ್ಕೆ ಕಾಂಗ್ರೆಸ್ ನಾಯಕರನ್ನು ಹೆದರಿಸಲು ಕೇಂದ್ರ ಸರ್ಕಾರ ಕೆಲವು ಅಧಿಕಾರಿಗಳನ್ನು ಕರ್ನಾಟಕಕ್ಕೆ ಕಳುಹಿಸಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಎಲ್ಲರೂ ಅಪ್ರಾಮಾಣಿಕವಾಗಿ ಕೆಲಸ ಮಾಡುವುದಿಲ್ಲ. ಆದರೆ ಕೆಲವು ಅಧಿಕಾರಿಗಳು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಈ ಎಲ್ಲಾ ಕಾರ್ಯಾಚರಣೆ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಷಡ್ಯಂತ್ರ ಇದೆ ಎಂದು ಗಂಭೀರ ಆರೋಪ ಮಾಡಿದರು.

ಮುಂದಿನ ದಿನಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್ಸಿಗರನ್ನು ಹೆದರಿಸಲು ದುರುದ್ದೇಶಪೂರ್ವಕ ದಾಳಿ ಮಾಡಿದರೆ ನಾವು ಸುಮ್ಮನಿರುವುದಿಲ್ಲ. ನಮ್ಮನ್ನು ಮುಟ್ಟಿದರೆ ಪರಿಣಾಮ ಕೆಟ್ಟದ್ದಾಗಿರುತ್ತದೆ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದಾಯ ತೆರಿಗೆಯಂತಹ ಇಲಾಖೆಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ನಮಗೆ ಆದಾಯ ತೆರಿಗೆ ಇಲಾಖೆ ಮೇಲೆ ಗೌರವ ಇದೆ. ಆದರೆ ರಾಜಕೀಯವಾಗಿ ಬಳಕೆ ಮಾಡಿಕೊಳ್ಳುವುದನ್ನು ಪ್ರತಿಭಟಿಸುತ್ತವೆ. ಈಗಾಗಲೇ ಚುನಾವಣೆ ಆಯೋಗಕ್ಕೂ ದೂರು ನೀಡಲಾಗಿದ್ದು, ಇಂತಹ ಧೋರಣೆ ತಡಗಟ್ಟಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ