ಕಾವೇರಿ ಜಲವಿವಾದ ಇನ್ನೊಂದು ತಿರುವು :

ನವದೆಹಲಿ,ಮಾ.22-ಕಾವೇರಿ ನದಿ ನೀರು ಹಂಚಿಕೆ ಕುರಿತ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೇರಳ ರಾಜ್ಯ ಸರ್ಕಾರ ಇಂದು ಸುಪ್ರೀಂಕೋರ್ಟ್ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದೆ. ಇದರೊಂದಿಗೆ ಕಾವೇರಿ ಜಲವಿವಾದ ಇನ್ನೊಂದು ತಿರುವು ಪಡೆದುಕೊಂಡಂತಾಗಿದೆ.
ಕೇರಳ ರಾಜ್ಯ ಸರ್ಕಾರದ ಪರವಾಗಿ ವಕೀಲರು ಇಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ಅರ್ಜಿ ಸಲ್ಲಿಸಿ ಕಾವೇರಿ ನೀರು ಹಂಚಿಕೆ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಮನವಿ ಮಾಡಿದೆ.
ಈ ಹಿಂದಿನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳಿಗೆ ಇಂತಿಷ್ಟು ಪ್ರಮಾಣದಲ್ಲಿ ನೀರು ಹಂಚಿಕೆ ಕುರಿತು ತೀರ್ಪು ಪ್ರಕಟಿಸಿ ಕಾವೇರಿ ನ್ಯಾಯ ಮಂಡಳಿಯ ಆದೇಶವನ್ನು ಎತ್ತಿ ಹಿಡಿದಿತ್ತು.
ಸುಪ್ರೀಂಕೋರ್ಟ್ ತೀರ್ಪಿಗೆ ತಮಿಳುನಾಡು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈಗ ಕೇರಳ ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿರುವುದರಿಂದ ಮತ್ತೆ ಈ ವಿವಾದದ ವಿಚಾರಣೆ ನಡೆಯುವ ನಿರೀಕ್ಷೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ