ವಿಜಯಪುರ, ಮಾ.21- ನಾವು ಹಿಂದೂ ಧರ್ಮ ಒಡೆದಿಲ್ಲ ಮತ್ತು ಹಿಂದೂ ಧರ್ಮದ ವಿರೋಧಿಗಳು ಅಲ್ಲ ಎಂದು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಬಿಜೆಪಿಯವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಕೇವಲ ರಾಜಕೀಯಕ್ಕಾಗಿ ಇದನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಕೂಡ ಜೈನ ಧರ್ಮದವರು ನಮ್ಮ ಧರ್ಮವೂ ಅವರಂತೆಯೇ ಸ್ವತಂತ್ರವಾಗಿರುತ್ತದೆಯೇ ಹೊರತು ಹಿಂದೂ ಧರ್ಮವನ್ನು ಬಿಟ್ಟು ಹೋಗುವಂತದ್ದಲ್ಲ. ಕೇವಲ ಅಪಪ್ರಚಾರ ನಡೆಸುವುದನ್ನು ಬಿಟ್ಟು ಸಮುದಾಯಕ್ಕೆ ಸಿಗುವ ಅವಕಾಶದ ಬಗ್ಗೆ ಚಿಂತಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಕೂಗು ಎದ್ದಾಗ ಸ್ವತಃ ಯಡಿಯೂರಪ್ಪ , ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ಅದಕ್ಕೆ ಬೆಂಬಲವಾಗಿ ನಿಂತು ಅದಕ್ಕೆ ಸಹಿ ಹಾಕಿದ್ದಾರೆ. ಆಗ ಅವರಿಗೆ ಇದು ತಿಳಿದಿರಲಿಲ್ಲವೇ? ಈಗ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇದುವರೆಗೂ ಸ್ವತಂತ್ರ ಧರ್ಮವಿದ್ದರೂ ಹಿಂದೂ ಧರ್ಮ ಬಿಟ್ಟು ಯಾರೂ ಹೋಗಿಲ್ಲ. ಸರ್ಕಾರ ಮಾಡಿರುವ ಶಿಫಾರಸ್ಸಿನಿಂದ ಹಿಂದೂ ಧರ್ಮಕ್ಕೂ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದಾಖಲಾತಿ ಪ್ರಕಾರ ನಮ್ಮದು ಲಿಂಗಾಯತ ಧರ್ಮವಾಗುತ್ತದೆ. ಜೈನ, ಸಿಖ್ ಸೇರಿದಂತೆ ಇತರ ಸ್ವತಂತ್ರ ಧರ್ಮದಂತೆಯೇ ಮೀಸಲಾತಿ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.
ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರು ಅಮಾಯಕರು. ಅವರು ಹಿರಿಯರು ಅವರ ಹೇಳಿಕೆಯನ್ನು ಟೀಕಿಸಲು ಹೋಗುವುದಿಲ್ಲ. ಅವರೊಂದಿಗೆ ಮಾತನಾಡಿ ಎದ್ದಿರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.