ಸಂಸತ್ತಿನ ಉಭಯ ಸದನಗಳಲ್ಲೂ 13ನೇ ದಿನವಾದ ಇಂದೂ ಕೂಡ ಗದ್ದಲ-ಕೋಲಾಹಲದ ಅದೇ ರಾಗ ಅದೇ ಹಾಡು:

ನವದೆಹಲಿ, ಮಾ.21-ಸಂಸತ್ತಿನ ಉಭಯ ಸದನಗಳಲ್ಲೂ 13ನೇ ದಿನವಾದ ಇಂದೂ ಕೂಡ ಗದ್ದಲ-ಕೋಲಾಹಲದ ಅದೇ ರಾಗ ಅದೇ ಹಾಡು ಮುಂದುವರಿದು ಕಲಾಪಗಳನ್ನು ನಾಳೆಗೆ ಮುಂದೂಡಲಾಗಿದೆ.
ಪಿಎನ್‍ಬಿ ಹಗರಣ, ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್, ಕಾವೇರಿ ಜಲವಿವಾದ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸತತ 13ನೇ ದಿನವೂ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗಿ ಉಭಯ ಸದನಗಳ ಕಲಾಪವನ್ನು ಮುಂದೂಡಲಾಗಿದೆ. ಮಾ.5ರಿಂದಲೂ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯದೇ ಯಥಾಸ್ಥಿತಿ ಬಿಕ್ಕಟ್ಟು ಮುಂದುವರಿದಂತಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿರುವ ಅವಿಶ್ವಾಸ ನಿರ್ಣಯ ಕುರಿತು ಚರ್ಚೆಗೆ ಇಂದೂ ಸಹ ಆಸ್ಪದವಾಗಿಲ್ಲ.
ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ, ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಪ್ರಶ್ನೋತ್ತರ ಕಲಾಪ ನಡೆಸಲು ಮುಂದಾದರು. ಆದರೆ ಟಿಡಿಪಿ ಮತ್ತು ಟಿಆರ್‍ಎಸ್ ಸದಸ್ಯರು ಆಂಧ್ರಪ್ರದೇಶಕ್ಕಾಗಿ ವಿಶೇಷ ಪ್ಯಾಕೇಜ್‍ಗಾಗಿ ತಮ್ಮ ಬೇಡಿಕೆಯನ್ನು ಯಥಾ ಪ್ರಕಾರ ಮುಂದುವರಿಸಿದರು. ಇನ್ನೊಂದೆಡೆ ಎಐಎಡಿಎಂಕೆ ಮತ್ತು ಡಿಎಂಕೆ ಸದಸ್ಯರು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಪಟ್ಟು ಹಿಡಿದು ಧರಣಿ ನಡೆಸಿದರು. ಮತ್ತೊಂದೆಡೆ ಕಾಂಗ್ರೆಸ್ ಮತ್ತು ಟಿಎಂಸಿ ಸದಸ್ಯರು ಎಂದಿನಂತೆ ಬ್ಯಾಂಕ್ ಹಗರಣಗಳನ್ನು ಪ್ರಸ್ತಾಪಿಸಿ ಪ್ರತಿಭಟನೆ ಕೈಗೊಂಡರು.
ಪ್ರತಿಭಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಸುಮಿತ್ರ ಮಹಾಜನ್ ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಮತ್ತೆ ಮತ್ತೆ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದರೂ ಫಲ ನೀಡಲಿಲ್ಲ.
ಪ್ರತಿಭಟನಾನಿರತ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳಕ್ಕೆ ಧಾವಿಸಿ ಧರಣಿ ನಡೆಸಿದರು. ಸದಸ್ಯರನ್ನು ಸಮಾಧಾನಗೊಳಿಸಲು ಯತ್ನಿಸಿ ವಿಫಲರಾದ ಸುಮಿತ್ರಾ ಮಹಾಜನ್ ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಿದರು.
ಪುನಃ ಕಲಾಪ ಸಮಾವೇಶಗೊಂಡಾಗ ಅದೇ ಪರಿಸ್ಥಿತಿ ಮುಂದುವರೆಯಿತು. ಸದನ ಕಲಾಪ ಸುಗಮವಾದರೆ ಮಾತ್ರ ಟಿಡಿಪಿ ಅವಿಶ್ವಾಸ ನಿರ್ಣಯ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿ ಸಭಾಧ್ಯಕ್ಷರು ಪುನರುಚ್ಚರಿಸಿ ಸದನವನ್ನು ನಾಳೆಗೆ ಮುಂದೂಡಿದರು.
ಮೇಲ್ಮನೆಯಲ್ಲೂ ಅದೇ ಸ್ಥಿತಿ : ಮುಂದುವರೆದ ಬಜೆಟ್ ಅಧಿವೇಶನದ 13ನೇ ದಿನವೂ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ಹಗರಣ, ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್‍ಗೆ ಆಗ್ರಹ, ಕಾವೇರಿ ಜಲವಿವಾದ ಮೊದಲಾದ ವಿಷಯಗಳು ಕಲಾಪವನ್ನು ಬಲಿ ತೆಗೆದುಕೊಂಡಿವೆ.
ಇದಾದ ನಂತರ ಕಾಂಗ್ರೆಸ್ ಮತ್ತು ಟಿಎಂಸಿ ಸದಸ್ಯರು ಪಿಎನ್‍ಬಿ ಹಗರಣ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ಟಿಡಿಪಿ ಸದಸ್ಯರು ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಬಿಗಿಪಟ್ಟು ಮುಂದುವರಿಸಿದರು.
ಇದರಿಂದಾಗಿ ಸದನದಲ್ಲಿ ಭಾರೀ ಗದ್ದಲ-ಕೋಲಾಹಲ ನಿರ್ಮಾಣವಾಯಿತು. ಪ್ರತಿಭಟನಾನಿರತ ಸದಸ್ಯರನ್ನು ಸಮಾಧಾನಪಡಿಸಲು ಸಭಾಪತಿ ವೆಂಕಯ್ಯ ನಾಯ್ಡು ಪುನರಾವರ್ತಿತ ಮನವಿ ಮಾಡಿದರೂ ಪರಿಸ್ಥಿತಿ ತಿಳಿಗೊಳ್ಳಲಿಲ್ಲ. ಇದರಿಂದ ಬೇಸತ್ತ ನಾಯ್ಡು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಸದಸ್ಯರ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಲಾಪವನ್ನು ನಾಳೆಗೆ ಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ