ನವದೆಹಲಿ, ಮಾ.20-ನಾಲ್ಕು ಕೋಟಿಗಳಿಗೂ ಅಧಿಕ ಸಂಖ್ಯೆಯಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ದೊಡ್ಡ ಮಟ್ಟದಲ್ಲಿ ಪರಿಹಾನ ನೀಡುವ ಪ್ರಯತ್ನವಾಗಿ, ಅವರನ್ನು ಅಧಿಕೃತ ವಲಯದ ಉದ್ಯೋಗಿಗಳಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರನ್ನು ಸಮಾಜ ಕಲ್ಯಾಣ ಕಾನೂನುಗಳ ಪರಿಧಿಯೊಳಗೆ ತರಬೇಕು ಹಾಗೂ ಭವಿಷ್ಯ ನಿಧಿ, ಕನಿಷ್ಠ ವೇತನ, ಪಾವತಿ ಹೆರಿಗೆ ರಜೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಅವರನ್ನು ಅಧಿಕೃತ ವಲಯದ ನೌಕರರನ್ನಾಗಿ ಪರಿಗಣಿಸುವಂತೆ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
ಹಿರಿಯ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ಮತ್ತು ದೀಪಕ್ ಗುಪ್ತ ಅವರನ್ನು ಒಳಗೊಂಡ ಪೀಠವು ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಇಂಥ ಕಾರ್ಮಿಕರಿಗೆ ಸೂಕ್ತ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ, ವೃದ್ದಾಪ್ಯ ವೇತನ, ವಿಕಲಚೇತನ ಮಾಸಾಶನ ಹಾಗೂ ಗೌರವಾನಿತ್ವ ಜೀವನ ನಡೆಸಲು ಅಗತ್ಯವಾದ ಇತರ ಫಲಾನುಭವಗಳನ್ನು ನೀಡುವಂತೆ ಕೇಂದ್ರಕ್ಕೆ ಸೂಚಿಸಿದೆ.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ(ಉದ್ಯೋಗ ಮತ್ತು ಸೇವೆಗಳ ಸ್ಥಿತಿ ಸುಧಾರಣೆ) ಕಾಯ್ದೆ, 1996 ಅಧಿನಿಯಮವನ್ನು ಸಂಸತ್ತು ರೂಪಿಸಿದ್ದರೂ ನಿರ್ಮಾಣ ಕಾರ್ಮಿಕರ ದುರಾವಸ್ಥೆ ನಿವಾರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕಾರ್ಮಿಕರ ಕಲ್ಯಾಣಕ್ಕಾಗಿ ಕೆಲವು ವರ್ಷಗಳಿಂದ 37,400 ಕೋಟಿ ರೂ.ಗಳ ಸುಂಕ ಸಂಗ್ರಹಿಸಲಾಗಿದ್ದು, ಇದರಲ್ಲಿ 9,500 ಕೋಟಿ ರೂ.ಗಳನ್ನು ಮಾತ್ರ ಬಳಸಲಾಗಿದ್ದು, ಉಳಿದ ಹಣ ಹಾಗೆ ಉಳಿದಿದೆ ಎಂಬ ಸಂಗತಿಯನ್ನೂ ಸಹ ನ್ಯಾಯಾಲಯ ಉಲ್ಲೇಖಿಸಿದೆ.