ಬ್ರಾಹ್ಮಣ ಧರ್ಮ ಯಾಕೆ ಸ್ವತಂತ್ರ ಧರ್ಮ ಆಗಬಾರದು ?

ಬೆಂಗಳೂರು:ಮಾ-20: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಿದ ಬೆನ್ನಲ್ಲೇ ಈಗ ಬ್ರಾಹ್ಮಣ ವಲಯದಲ್ಲಿ ಹೊಸದೊಂದು ಚರ್ಚೆ ಆರಂಭವಾಗಿದೆ. ಸ್ವತಂತ್ರ ಧರ್ಮವಾಗಲು ಬ್ರಾಹ್ಮಣ ಧರ್ಮ ಅಥವಾ ವೈದಿಕ ಧರ್ಮ ಸರ್ವ ಗುಣ ಲಕ್ಷಣಗಳನ್ನೂ ಹೊಂದಿದೆ. ಅದರದೇ ಆದ ಧರ್ಮಗ್ರಂಥ ವಿದೆ. ಅವರದೇ ದೇವಸ್ಥಾನಗಳನ್ನು ಹೊಂದಿದ್ದಾರೆ. ಅವರದೇ ಆದ ವಿಶಿಷ್ಟ ಆಹಾರ ಪದ್ಧತಿಗಳನ್ನು ಅವರು ಹೊಂದಿದ್ದಾರೆ. ಹೀಗಿರುವಾಗ ಬ್ರಾಹ್ಮಣ ಧರ್ಮ ಯಾಕೆ ಸ್ವತಂತ್ರ ಧರ್ಮ ಆಗಬಾರದು ಎಂಬುದು ಹಲವರ ಪ್ರಶ್ನೆಯಾಗಿದೆ.

ಸ್ವತಂತ್ರಧರ್ಮವೆಂದು ಬ್ರಾಹ್ಮಣ ಧರ್ಮಕ್ಕೆ ಮಾನ್ಯತೆ ನೀಡುವದರಿಂದ ಈ ದೇಶದ ಹಲವು ಸಾಮಾಜಿಕ ಸಂಘರ್ಷಗಳು, ಸಮಸ್ಯೆಗಳು ಇತ್ಯರ್ಥವಾಗುತ್ತದೆ
ಎಂಬುದನ್ನು ಕೆಲವು ಅಂಶಗಳನ್ನು ಮುಂದಿಡುವ ಮೂಲಕ ಹೊಸದೊಂದು ಆಂದೋಲನ ಆರಂಭವಾಗುವ ನಿಟ್ಟಿನಲ್ಲಿ ಈಗ ಚರ್ಚೆ ಆರಂಭವಾಗಿದೆ.

* ಬ್ರಾಹ್ಮಣ ಧರ್ಮ ಸ್ವತಂತ್ರ ಧರ್ಮವಾಗುವುದರಿಂದ ಅವರ ದೇವಸ್ಥಾನದೊಳಗೆ ನಮಗೂ ಪ್ರವೇಶಕೊಡಿ ಎಂದು ಇತರರು ಕೇಳುವ, ದಲಿತರನ್ನು ಅರ್ಚಕರನ್ನಾಗಿ ಮಾಡಿ ಒತ್ತಾಯಿಸುವ ಪ್ರಮೇಯವೇ ಬರುವುದಿಲ್ಲ. ಚರ್ಚ್, ಮಸೀದಿಗಳಿಗೆ ಇತರ ಧರ್ಮೀಯರು ಪ್ರವೇಶಿಸಬೇಕೆಂದು ಆಗ್ರಹಿಸಿದ್ದನ್ನು ಎಲ್ಲಿಯಾದರೂ ಕೇಳಿದ್ದೇವೆಯೆ? ಆದುದರಿಂದ ಈ ದೇಶದ ಎದುರಿಸುತ್ತಿರುವ ಒಂದು ಪ್ರಮುಖ ಸಂಘರ್ಷಕ್ಕೆ ಪೂರ್ಣವಿರಾಮ ಬೀಳುತ್ತದೆ.

* ಪೇಜಾವರಂಥ ಹಿರಿಯರಿಗೆ ಅನಗತ್ಯವಾಗಿ ‘ಪಂಕ್ತಿ ಭೇದ ನಿಲ್ಲಿಸಿ’ ಎಂದು ಪರೋಕ್ಷವಾಗಿ ಚುಚ್ಚುವುದೂ ತಪ್ಪುತ್ತದೆ. ಯಾಕೆಂದರೆ ಸ್ವತಂತ್ರ ಧರ್ಮವಾದ ಬಳಿಕ ದೇವಸ್ಥಾನದೊಳಗೆ ಪಂಕ್ತಿ ಭೇದದ ಅಗತ್ಯವೇ ಬೀಳುವುದಿಲ್ಲ. ಅಲ್ಲಿ ಒಂದೇ ಪಂಕ್ತಿ ಇರುತ್ತದೆ. ಬೇರೆ ಧರ್ಮೀಯರಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಬಹುದು. ಕಳೆದ ಬಾರಿ ಇಫ್ತಾರ್‌ಗೆ ವ್ಯವಸ್ಥೆ ಮಾಡಿದ ಹಾಗೆ. ಇದರಿಂದ ಆಹಾರದ ಕುರಿತಂತೆ ಇರುವ ಒಂದು ದೊಡ್ಡ ಮುಜುಗರದಿಂದ, ಧರ್ಮಸಂಕಟದಿಂದ ವೈದಿಕರು ಪಾರಾಗುತ್ತಾರೆ.

* ಸಾಧಾರಣವಾಗಿ ಮೀಸಲಾತಿಯ ಬಗ್ಗೆ ಬ್ರಾಹ್ಮಣ ಧರ್ಮಕ್ಕೆ ಒಂದು ನೋವಿದೆ. ಈ ನೋವೂ ಪರಿಹಾರವಾಗುತ್ತದೆ. ಯಾಕೆಂದರೆ ಬ್ರಾಹ್ಮಣ ಧರ್ಮೀಯರಿಗೆ ಅಲ್ಪಸಂಖ್ಯಾತ ವ್ಯಾಪ್ತಿಯಲ್ಲಿ ಮೀಸಲಾತಿಯನ್ನು ನೀಡಬಹುದು. ಒಂದು ನಿರ್ದಿಷ್ಟ ಮೀಸಲಾತಿಯ ಗಡಿಯನ್ನು ಅವರಿಗೆ ನೀಡಿ, ಉಳಿದ ಪರ್ಸಂಟೇಜನ್ನು ಧಾರಾಳವಾಗಿ ಇತರರಿಗೆ ಹಂಚಬಹುದು.

* ಬ್ರಾಹ್ಮಣೇತರರ ಐಡೆಂಟಿಟಿ ಕ್ರೈಸಿಸ್‌ಗೂ ತೆರೆ ಬೀಳುತ್ತದೆ. ತಮ್ಮ ತಮ್ಮ ನೆಲೆಗಳು ಯಾವುದು ಎನ್ನುವುದನ್ನು ಕಂಡುಕೊಳ್ಳಲು, ತಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇತರ ಜಾತಿಗಳಿಗೂ ಅನುಕೂಲವಾಗುತ್ತದೆ.

* ಮಾಂಸಾಹಾರಗಳನ್ನು ಸೇವಿಸುತ್ತಾ ತಮ್ಮ ದೇವರ ಮಡಿ ಮೈಲಿಗೆಗಳನ್ನು ಕೆಡಿಸುವ ಇತರ ಜಾತಿ ಧರ್ಮೀಯರು ಪ್ರವೇಶಿಸುವುದಕ್ಕೂ ಇದು ತಡೆಯಾಗುತ್ತದೆ.

* ಇತರ ಜಾತಿಯವರು ಮುಂದೆ ‘ಬ್ರಾಹ್ಮಣರು ಶೋಷಿಸುತ್ತಿದ್ದಾರೆ’ ಎಂದು ಹೇಳುವಂತೆಯೂ ಇಲ್ಲ. ಯಾಕೆಂದರೆ ಅವರ ಧರ್ಮ, ಇವರ ಧರ್ಮ ಬೇರೆ ಬೇರೆಯಾಗಿರುವುದರಿಂದ ಬ್ರಾಹ್ಮಣರು ಶೋಷಿಸುವ ಪ್ರಶ್ನೆಯೇ ಇಲ್ಲ.

ಆದುದರಿಂದ ಬ್ರಾಹ್ಮಣ ಧರ್ಮಕ್ಕೆ ಪ್ರತ್ಯೇಕ ಅಥವಾ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವದರಿಂದ ಈ ನೆಲದ ಶೇ. 50ರಷ್ಟು ಸಾಮಾಜಿಕ ಸಂಘರ್ಷಗಳು ಪರಿಹಾರವಾಗುತ್ತದೆ. ಬ್ರಾಹ್ಮಣ ಧರ್ಮ ಸ್ವತಂತ್ರ ಧರ್ಮವಾಗಲಿ ಎನ್ನುವ ಆಂದೋಲವೊಂದು ಶುರುವಾಗುವ ಅಗತ್ಯವಿದೆ ಎಂಬುದು ಹಲವು ಬ್ರಾಹ್ಮಣರ ಅಭಿಪ್ರಾಯವಾಗಿದೆ.

Why Brahmin should not become an independent religion?,New discussion starts

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ