ಮುಂಬೈ, ಮಾ.20-ಕಳೆದ 30 ವರ್ಷಗಳಿಂದ ಜಾರಿಯಲ್ಲಿರುವ ಡಯಾಬಿಟಿಸ್ ನಿರ್ವಹಣೆ ವಿಧಾನಗಳನ್ನು ಬದಲಿಸುವ ಉದ್ದೇಶದ ಜಾಗತಿಕ ಹೊಸ ಮಾರ್ಗಸೂಚಿ ಈಗ ಭಾರತೀಯ ವೈದ್ಯ ಸಮುದಾಯದಲ್ಲಿ ವಿವಾದ ಸೃಷ್ಟಿಸಿದೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣದ ನಿಯಂತ್ರಣ ಗುರಿಗಳಿಗೆ ವಿನಾಯಿತಿ ನೀಡಲು ಹೊಸ ಮಾರ್ಗಸೂಚಿಯಲ್ಲಿ ಮಾಡಿರುವ ಶಿಫಾರಸಿಗೆ ಭಾರತದ ವೈದ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಮಧುಮೇಹ ರೋಗಿಗಳಿಗೆ ಗಂಭೀರ ತೊಡಕುಗಳನ್ನು ಉಂಟು ಮಾಡುವುದಲ್ಲದೆ, ಚಿಕಿತ್ಸಾ ವಿಧಾನದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ ಎಂದು ವೈದ್ಯ ಸಮುದಾಯ ಅಭಿಪ್ರಾಯಪಟ್ಟಿದೆ.
ಸಕ್ಕರೆರೋಗ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಅಮೆರಿಕನ್ ಕಾಲೇಜ್ ಆಫ್ ಫಿಸಿಷಿಯನ್ಸ್ ನಾಲ್ಕು ಪ್ರಮುಖ ಮಾರ್ಗಸೂಚಿಗಳನ್ನು ಶಿಫಾರಸು ಮಾಡಿದೆ. ಆದರೆ, ಇವುಗಳು ಭಾರತೀಯರ ಶೈಲಿಗೆ ಸರಿ ಹೊಂದುವುದಿಲ್ಲ. ಕಳೆದ ಮೂರು ದಶಕಗಳಿಂದ ಅನುಸರಿಸಿಕೊಂಡು ಬಂದಿರುವ ಪದ್ಧತಿಯನ್ನು ಹಠಾತ್ ಬದಲಿಸುವುದರಿಂದ ರೋಗಿಗಳ ಆರೋಗ್ಯ ಏರುಪೇರಾಗಿ ಗಂಭೀರ ಪರಿಣಾಮ ಎದುರಾಗುತ್ತದೆ. ಜೊತೆಗೆ ಗೊಂದಲ ಸೃಷ್ಟಿಯಾಗುತ್ತದೆ. ಆದ್ದರಿಂದ ಈ ಹೊಸ ಮಾರ್ಗಸೂಚಿ ಸಲಹೆಗಳನ್ನು ಭಾರತದಲ್ಲಿ ನಿರ್ಲಕ್ಷಿಸುವುದೇ ಉತ್ತಮ ಎಂದು ಡಯಾಬಿಟಿಸ್ ತಜ್ಞರು ಸ್ಪಷ್ಟಪಡಿಸಿದ್ದಾರೆ.
ಇಂಟರ್‍ನ್ಯಾಷನಲ್ ಡಯಾಬಿಟಿಸ್ ಫೆಡರೇಷನ್ ಪ್ರಕಾರ ಪ್ರಸ್ತುತ ಭಾರತದಲ್ಲಿ 72 ದಶಲಕ್ಷ ಡಯಾಬಿಟಿಸ್ ರೋಗಿಗಳಿದ್ದಾರೆ. ಆದರೆ ದೀರ್ಘಾವಧಿ ಬ್ಲಡ್ ಶುಗರ್ (ರಕ್ತದಲ್ಲಿನ ಸಕ್ಕರೆ ಅಂಶ) ನಿರ್ವಹಣೆ ಗುರಿಯನ್ನು ಸಡಿಲಗೊಳಿಸಬೇಕು ಎಂದ ಸಲಹೆಗೆ ಭಾರತದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕಳೆದ ಕೆಲವು ತಿಂಗಳ ಅವಧಿಗೆ ವ್ಯಕ್ತಿಯೊಬ್ಬನ ಸರಾಸರಿ ಬ್ಲಡ್ ಶುಗರ್ ಅಂದಾಜು ಮಾಡುವ ರಕ್ತ ಪರೀಕ್ಷೆ ವಿಧಾನ ಭಾರತದಲ್ಲಿ ಜಾರಿಯಲ್ಲಿದೆ. ಆದರೆ ಈ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕೆಂಬ ಶಿಫಾರಸ್ಸಿನ ಬಗ್ಗೆ ವೈದ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
30 ವರ್ಷಗಳಿಗೂ ಹೆಚ್ಚು ಕಾಲದಿಂದ ಅನುಸರಿಸಿಕೊಂಡು ಬಂದಿರುವ ಪದ್ಧತಿ ಭಾರತೀಯ ವ್ಯವಸ್ಥೆಗೆ ಹೊಂದಿಕೆಯಾಗಿದೆ. ಆದರೆ ಹೊಸ ಮಾರ್ಗಸೂಚಿ ಪಾಲಿಸಿದರೆ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರಾಗುತ್ತದೆ. ಇದು ಜಟಿಲ ಅನಾರೋಗ್ಯ ಸಮಸ್ಯೆಗಳಿಗೂ ಎಡೆ ಮಾಡಿಕೊಡುತ್ತದೆ. ಅಲ್ಲದೇ ಜಾರಿಯಲ್ಲಿರುವ ಚಿಕಿತ್ಸಾ ವಿಧಾನ ಬದಲಾವಣೆಗೆ ಕಾರಣವಾಗಿ ಗೊಂದಲ ಉಂಟಾಗುತ್ತದೆ ಎಂಬುದು ವೈದ್ಯಕೀಯ ಸಮುದಾಯದ ವಾದವಾಗಿದೆ.