ನವದೆಹಲಿ,ಮಾ.20-ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಆಜ್ಮೀರ್ ಶರೀಫ್ ದರ್ಗಾಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ವೀಸಾ ನೀಡಲು ಭಾರತದ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ ಎಂದು ಪಾಕಿಸ್ತಾನ ಮತ್ತೊಂದು ಆರೋಪ ಮಾಡಿದೆ.
ಅಜ್ಮೀರ್ ನಲ್ಲಿ ನಿನ್ನೆಯಿಂದ ಆರಂಭಗೊಂಡಿರುವ ಹಜರತ್ ಖಾವಾಜ್ ಮೊಯಿನುದ್ದೀನ್ ಚಿಷ್ಟಿ ಉರುಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉದ್ದೇಶಿಸಿದ್ದ 503 ಪಾಕಿಸ್ತಾನದ ಯಾತ್ರಾರ್ಥಿಗಳಿಗೆ ಭಾರತ ವೀಸಾ ನೀಡದಿರುವುದು ತೀವ್ರ ಅಸಮಾಧಾನ ಮೂಡಿಸಿದೆ ಎಂದು ಹೇಳಿದೆ.
ಭಾರತದ ನಿರ್ಧಾರದಿಂದಾಗಿ ಪ್ರಸಿದ್ಧ ಉರುಸ್ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಯಾತ್ರಾರ್ಥಿಗಳು ಭಾಗವಹಿಸದಂತಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಭಾರತ, ವೀಸಾ ಅರ್ಜಿಯಲ್ಲಿನ ಮಾಹಿತಿ ಪರಿಶೀಲನೆಗೆ ಪಾಕಿಸ್ತಾನ ಸರ್ಕಾರ ತಿರಸ್ಕರಿಸಿದೆ. ಇಂತಹ ಭೇಟಿ ಸಂದರ್ಭದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಕೆಲವೊಂದು ಪ್ರಕ್ರಿಯೆ ನಡೆದ ಬಳಿಕ ವೀಸಾ ನೀಡಲಾಗುತ್ತದೆ. ಆದಾಗ್ಯೂ ಅಗತ್ಯ ಭದ್ರತೆಗಾಗಿ ಆಗ್ಗಾಗ್ಗೇ ಇಂತಹ ಭೇಟಿ ಮಾಡುವುದು ಸಾಧ್ಯವಿಲ್ಲ. ಹಿಂದೆ ಕೆಲವೊಂದು ಘಟನೆ ನಡೆದಾಗಲೂ ಉಭಯ ದೇಶಗಳಿ ಕಡೆಯಿಂದಲೂ ಇಂತಹ ಯಾವುದೇ ಭೇಟಿಗೆ ಅವಕಾಶ ನೀಡಿರಲಿಲ್ಲ ಎಂದು ತಿಳಿಸಿದೆ.