ಮಂಗಳೂರು, ಮಾ.20-ಹೈದರಾಬಾದ್-ಕರ್ನಾಟಕ ಹಾಗೂ ಮುಂಬೈ-ಕರ್ನಾಟಕದ ಪ್ರವಾಸ ಯಶಸ್ವಿಯಾದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಕರಾವಳಿಯಲ್ಲಿಂದು ಮಿಂಚಿನ ಸಂಚಾರ ನಡೆಸಿದ ಅವರು ದೇಶದಲ್ಲಿ ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕಬೇಕೆಂದು ಕರೆ ನೀಡಿದರು.
ಕೋಮುವಾದಿ ಶಕ್ತಿಗಳಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಬೇಕು ಎಂದು ಹೇಳಿದರು.
3ನೇ ಹಂತದ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ದೆಹಲಿಯಿಂದ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ರಮಾನಾಥರೈ ಹಲವರು ಸ್ವಾಗತಿಸಿದರು.
ಕರಾವಳಿಯಲ್ಲಿ ಕೇಸರಿಗೆ ಟಾಂಗ್ ನೀಡಲು ಕಾಂಗ್ರೆಸ್ ಹಮ್ಮಿಕೊಂಡಿರುವ ಜನಾಶೀರ್ವಾದ ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಬಿಜೆಪಿಯ ಫೈರ್ಬ್ರಾಂಡ್ಗಳಾದ ಅನಂತ್ಕುಮಾರ್ ಹೆಗಡೆ, ನವೀನ್ಕುಮಾರ್ ಕಟೀಲು ಮುಂತಾದವರ ತೀಕ್ಷ್ಣ ಮಾತುಗಳಿಗೆ ರಾಹುಲ್ಗಾಂಧಿ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಮುಂದಿನ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಗೇರಲೇಬೇಕೆಂಬ ಪಣ ತೊಟ್ಟಿರುವ ಕಾಂಗ್ರೆಸ್ ಮತದಾರರನ್ನು ಸೆಳೆಯಲು ಹಲವಾರು ಕಸರತ್ತುಗಳನ್ನು ಮಾಡುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರು ಹೈ-ಕ ಮತ್ತು ಮು-ಕರ್ನಾಟಕದಲ್ಲಿ ನಡೆಸಿದ ಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿತ್ತು.
ಇಂದು ಉಡುಪಿ, ಮಂಗಳೂರಿನ ಹಲವು ಭಾಗಗಳಲ್ಲಿ ರಾಹುಲ್ ನಡೆಸಿದ ಪ್ರವಾಸ, ರ್ಯಾಲಿ, ರೋಡ್ಶೋ ಸಮಾವೇಶಗಳಿಗೆ ಜನಸಾಗರ ಹರಿದುಬಂದಿತ್ತು. ಇಂದು ಬೆಳಗ್ಗೆ ಮಂಗಳೂರಿಗೆ ವಿಮಾನದ ಮೂಲಕ ಆಗಮಿಸಿದ ರಾಹುಲ್ಗಾಂಧಿಯವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಮಧ್ಯಾಹ್ನ ರಾಜೀವ್ಗಾಂಧಿ ನ್ಯಾಷನಲ್ ಅಕಾಡೆಮಿ ನವೀಕೃತ ಕಟ್ಟಡದ ಉದ್ಘಾಟನೆ ನೆರವೇರಿಸಿದರು. ಸೇವಾದಳ ತರಬೇತಿ ಸಂಸ್ಥೆ ಉದ್ಘಾಟಿಸಿ ಬಸ್ ಮೂಲಕ ಪಡುಬಿದ್ರೆಗೆ ತೆರಳಿದರು. ಬಸ್ನಲ್ಲಿ ಸಂಚರಿಸುವ ಸಂದರ್ಭದಲ್ಲಿ ಮಾರ್ಗದ ಇಕ್ಕೆಲಗಳಲ್ಲಿ ಜನ ನಿಂತು ಎಐಸಿಸಿ ಅಧ್ಯಕ್ಷರನ್ನು ಸ್ವಾಗತಿಸಿದರು.
ಪಕ್ಷದ ಕಾರ್ಯಕರ್ತರು, ಯುವ ಮುಖಂಡರು, ಬಂಟಿಂಗ್ಸ್, ಬ್ಯಾನರ್ಗಳನ್ನು ಹಿಡಿದು ಜಯಕಾರದ ಘೋಷಣೆಗಳನ್ನು ಕೂಗಿದರು.
ಉಡುಪಿಯ ರಾಜೀವ್ಗಾಂಧಿ ಪೆÇಲಿಟಿಕಲ್ ಇನ್ಸ್ಟಿಟ್ಯೂಟ್ನ್ನು ಉದ್ಘಾಟಿಸಿದರು. ರಾಜ್ಯ ಸೇವಾದಳ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಪಡುಬಿದ್ರೆಯಲ್ಲಿ ರೋಡ್ಶೋ ನಡೆಸಿದರು.
ಮಧ್ಯಾಹ್ನ ಪಡುಬಿದ್ರೆಯಲ್ಲಿ ರೋಡ್ಶೋ ನಡೆಸಿ ಮಂಗಳೂರಿಗೆ ತೆರಳಿದ ಅವರನ್ನು ಭಾರೀ ಸ್ವಾಗತ ಕೋರಲಾಯಿತು. ಅಲ್ಲಿನ ಜ್ಯೋತಿ ಸರ್ಕಲ್ನಲ್ಲಿ ರೋಡ್ಶೋ ನಡೆಸಿ ಸಂಜೆ 7 ಗಂಟೆಗೆ ನೆಹರೂ ಮೈದಾನದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನಂತರ ಗೋಕರ್ಣ ಮಂದಿರ, ಲೋಜಾರಿಯೋ ಚರ್ಚ್, ಉಲ್ಲಾಳದುರ್ಗಕ್ಕೆ ಭೇಟಿ ನೀಡಿದರು.