ಚೆನ್ನೈ:ಮಾ-19; ತೆಲುಗು ದೇಶಂ ಪಕ್ಷದ ಸಮಸ್ಯೆಯನ್ನು ಕಾವೇರಿ ನದಿ ನೀರಿನ ಸಮಸ್ಯೆಗೆ ಹೋಲಿಕೆ ಮಾಡಬೇಡಿ ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಹೇಳಿದ್ದಾರೆ.
ಚೆನ್ನೈನಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರವನ್ನು ಆಂಧ್ರ ಪ್ರದೇಶದ ಸಮಸ್ಯೆಗೆ ಹೋಲಿಕೆ ಮಾಡಬೇಡಿ. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ನಮ್ಮ ಆಗ್ರಹ ಮುಂದುವರೆಯಲಿದ್ದು, ಅಂತೆಯೇ ಈ ಸಂಬಂಧ ಪ್ರತಿಭಟನೆ ಮುಂದುವರೆಯಲಿದೆ ಎಂದು ಹೇಳಿದರು.
ಈ ಹಿಂದೆ ಕಾವೇರಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ 6 ವಾರಗಳ ಕಾಲ ಕಾಲಾವಕಾಶ ನೀಡಿದೆ. ಅಲ್ಲಿಯವರೆಗೂ ಕಾದು ನೋಡೋಣ. ಬಳಿಕ ಮುಂದಿನ ನಿರ್ಧಾರದ ಕುರಿತು ಆಲೋಚಿಸೋಣ ಎಂದು ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ತಮಿಳುನಾಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ ಎಂಕೆ ಸ್ಚಾಲಿನ್ ಅವರು, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕೇಂದ್ರಕ್ಕೆ ನೀಡಿದ್ದ ತಮ್ಮ ಬೆಂಬಲ ವಾಪಸ್ ಪಡೆಯುವ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿ ತಮಗೆ ಬೇಕಾದ ವಿಶೇಷ ಸ್ಥಾನಮಾನಕ್ಕಾಗಿ ಪ್ರಯತ್ನ ಮುಂದುವರೆಸಿದದಾರೆ. ಆದರೆ ಅಂತಹ ಯಾವುದೇ ಪ್ರಯತ್ನಗಳು ರಾಜ್ಯ ಸರ್ಕಾರದಿಂದ ಕಾವೇರಿ ವಿಚಾರವಾಗಿ ಆಗುತ್ತಿಲ್ಲ, ಆಂಧ್ರ ಪ್ರದೇಶ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯ ನೋಟಿಸ್ ಅನ್ನು ಬೆಂಬಲಿಸುವ ಮೂಲಕ ಎಐಎಡಿಎಂಕೆ ಕೂಡ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ.