ಕಲ್ಲು ತೂರಾಟ ಸೇರಿದಂತೆ ಹಿಂಸಾರೂಪದ ಪ್ರತಿಭಟನೆಗಳು ಮೂಲಭೂತ ಹಕ್ಕಲ್ಲ – ಸುಪ್ರೀಂಕೋರ್ಟ್

ನವದೆಹಲಿ, ಮಾ.19- ಕಲ್ಲು ತೂರಾಟ ಸೇರಿದಂತೆ ಹಿಂಸಾರೂಪದ ಪ್ರತಿಭಟನೆಗಳು ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಹಿಂಸಾತ್ಮಕ ಪ್ರತಿಭಟನೆಗಳನ್ನು ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರೀತಿ ಮೂಲಭೂತ ಹಕ್ಕಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಪೀಠ ತಿಳಿಸಿದೆ.
ಪ್ರತಿಭಟನೆಗಳನ್ನು ನಡೆಸಲು ಸಮಂಜಸ ಕಾರಣಗಳು ಇದ್ದರೂ, ಅದನ್ನು ಹಿಂಸಾತ್ಮಕವಾಗಿ ನಡೆಸಲು ನಾಗರಿಕರಿಗೆ ಸಾವು-ನೋವು ಉಂಟು ಮಾಡಲು ಅಥವಾ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟು ಮಾಡಲು ಪ್ರತಿಭಟನಾಕಾರರಿಗೆ ಲೈಸೆನ್ಸ್ ನೀಡಿಲ್ಲ ಎಂದು ಸುಪ್ರೀಂಕೋರ್ಟ್ ಪೀಠವು ¸್ಪಷ್ಟ ಮಾತುಗಳಲ್ಲಿ ತಿಳಿಸಿದೆ.
ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಂತೆ ನ್ಯಾಯ ಸಮ್ಮತ ಪ್ರತಿಭಟನೆ ನಡೆಸುವುದು ಒಂದು ಮೂಲಭೂತ ಹಕ್ಕು. ಆದರೆ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ನಡೆಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಡಾರ್ಜಿಲಿಂಗ್ ಗಿರಿಧಾಮದಲ್ಲಿ ಇತ್ತೀಚೆಗೆ ನಡೆದ ಹಿಂಸಾರೂಪದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ತಮ್ಮನ್ನು ಬಂಧಿಸಲು ಪಶ್ಚಿಮ ಬಂಗಾಳ ಸರ್ಕಾರ ಮುಂದಾಗಿರುವುದಕ್ಕೆ ರಕ್ಷಣೆ ಕೋರಿ ಗೋರ್ಖಾ ಜನಮುಕ್ತಿ ಮೋರ್ಚಾ (ಜೆಜಿಎಂ) ನಾಯಕ ಬಿಮಲ್ ಗುರಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಪೀಠವು ಇದನ್ನು ಸ್ಪಷ್ಟಪಡಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ