ಲಕ್ನೋ, ಮಾ.17- ಉತ್ತರಪ್ರದೇಶದ ಪ್ರತಿಷ್ಠಿತ ಗೋರಖ್ಪುರ್ ಮತ್ತು ಫೂಲ್ಪುರ್ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಭರ್ಜರಿ ಗೆಲುವಿನಿ ಖುಷಿಯಲ್ಲಿರುವ ಸಮಾಜವಾದಿ ಪಕ್ಷ(ಎಸ್ಪಿ) ಮತ್ತು ಬಹುಜನ ಸಮಾಜ(ಬಿಎಸ್ಪಿ) ಮುಂಬರುವ ಉಪ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಸಲು ನಿರ್ಧರಿಸಿವೆ.
ಉತ್ತರಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರ ಹಾಗೂ ನೂರ್ಪುರ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಐದು ತಿಂಗಳ ಒಳಗೆ ನಡೆಯಲಿದ್ದು, ಎಸ್ಪಿ-ಬಿಎಸ್ಪಿ ಮೈತ್ರಿ ಈ ಉಪ ಸಮರದಲ್ಲೂ ಮುಂದುವರಿಯಲಿದೆ. ಬಿಜೆಪಿ ಸಂಸದ ಹುಕುಂ ಸಿಂಗ್ ಹಾಗೂ ಅದೇ ಪಕ್ಷದ ಶಾಸಕ ಲೋಕೇಂದ್ರ ಸಿಂಗ್ ನಿಧನದಿಂದ ಈ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಈ ಉಪ ಚುನಾವಣಾ ಫಲಿತಾಂಶದ ಆಧಾರದ ಮೇಲೆ 2019ರ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಿಎಸ್ಪಿ ಬೆಂಬಲದೊಂದಿಗೆ ಈ ಎರಡೂ ಕ್ಷೇತ್ರಗಳಲ್ಲೀ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಅಖಿಲೇಶ್ ನಾಯಕತ್ವದ ಎಸ್ಪಿ ಬಯಕೆ ಹೊಂದಿದೆ.