ಕೊಪ್ಪಳ,ಮಾ.17- ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಯಾವುದೇ ಅಧಿಕಾರಿಗಳು ಸರ್ಕಾರ ವರ್ಗಾವಣೆ ಮಾಡಿದ ಕಡೆ ಹೋಗಬೇಕು. ಇವರೇನು ಮೇಲಿನಿಂದ ಇಳಿದುಬಂದವರೇ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಇಂದಿಲ್ಲಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ವರ್ಷಕ್ಕೆ 9 ತಿಂಗಳಲ್ಲೇ ಇಲ್ಲವೇ ಯಾವುದೇ ಸಂದರ್ಭದಲ್ಲಿ ವರ್ಗಾವಣೆ ಮಾಡಿದಾಗ ಹೋಗುವುದು ನಿಮ್ಮ ಕರ್ತವ್ಯ. ನೀವೇನು ಮೇಲಿನಿಂದ ಬಂದವರಲ್ಲ. ಸರ್ಕಾರಕ್ಕಿಂತ ಐಎಎಸ್, ಐಪಿಎಸ್ ದೊಡ್ಡವರೇ ಎಂದು ಖಾರವಾಗಿ ಪ್ರಶ್ನಿಸಿದರು.
ಕೆಲ ದಿನಗಳ ಹಿಂದೆ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಕೊಪ್ಪಳದ ಎಸ್ಪಿ ಅನೂಪ್ ಚೇತನ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಇಬ್ಬರು ಅಧಿಕಾರಿಗಳು ಕರ್ನಾಟಕ ಆಡಳಿತ ನ್ಯಾಯಾಧೀಕರಣ(ಕೆಎಟಿ) ಮೂಲಕ ತಡೆಯಾಜ್ಞೆ ತಂದಿದ್ದರು.
ಇದಕ್ಕೆ ರಾಯರೆಡ್ಡಿ ಹರಿಹಾಯ್ದಿದ್ದಾರೆ. ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಸರ್ಕಾರಕ್ಕಿರುವ ಪರಮಾಧಿಕಾರ. ನಿಮ್ಮನ್ನು ವರ್ಗಾವಣೆ ಮಾಡಿದ್ದೇ ತಪ್ಪು ಎನ್ನುವುದಾದರೆ ಸರ್ಕಾರ ಏತಕ್ಕೆ ಬೇಕು, ಇಲ್ಲವೇ ಜನಪ್ರತಿನಿಧಿಗಳಿಗೆ ಬೆಲೆಯೇ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ರಾಜಕಾರಣಿಗಳನ್ನು ಮಾತ್ರ ನಾವು ಭ್ರಷ್ಟರು ಎನ್ನುತ್ತೇವೆ. ಈ ಅಧಿಕಾರಿಗಳು ಮಾಡುವ ಲಾಬಿ ಯಾರಿಗೂ ತಿಳಿಯುವುದಿಲ್ಲ ಎಂದು ಚುಚ್ಚಿದರು.