ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕು : ರಾಜ್ಯ ಸಂಯೋಜಕ ಎನ್.ವಿ.ವಾಸುದೇವ ಶರ್ಮಾ

ಬೆಂಗಳೂರು, ಮಾ.17-ಬರುವ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ರಾಜ್ಯ ಸಂಯೋಜಕ ಎನ್.ವಿ.ವಾಸುದೇವ ಶರ್ಮಾ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮಕ್ಕಳ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಿ ವಿವಿಧ ಇಲಾಖೆಗಳ ಸಂಯೋಜಿತ ಪ್ರಯತ್ನದಲ್ಲಿ ಜಾರಿಗೊಳಿಸಬೇಕು ಎಂದು ಹೇಳಿದರು.

18 ವರ್ಷದೊಳಗಿನ ಪ್ರತಿಯೊಬ್ಬರನ್ನು ಮಗು ಎಂದು ಪರಿಗಣಿಸಿ ಅವರ ಅವಶ್ಯಕತೆಗಳಿಗೆ ತಕ್ಕಂತೆ ಸೇವೆಗಳನ್ನು ಕಾತರಿಗೊಳಿಸಬೇಕು ಎಂದು ತಿಳಿಸಿದರು.
ರಾಜ್ಯದ ಆಯವ್ಯಯದಲ್ಲಿ ಮಕ್ಕಳ ಆರೋಗ್ಯಕ್ಕೆ ಶೇ.4ರಷ್ಟು , ಶಿಕ್ಷಣಕ್ಕೆ 2 ರಷ್ಟು, ರಕ್ಷಣೆಗೆ ಶೇ.2ರಷ್ಟು ಹಣವನ್ನು ಮೀಸಲಿರಿಸಬೇಕೆಂದು ಆಗ್ರಹಿಸಿದರು.
ಗ್ರಾಮೀಣ ಮಕ್ಕಳು, ವಲಸೆ ಕುಟುಂಬಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಶಿಶು ಮರಣ, ಹೆರಿಗೆ ವೇಳೆ ತಾಯಂದಿರ ಮರಣ, ಹೆಣ್ಣು ಶಿಶು- ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಾಲಾ ಮಕ್ಕಳ ರಕ್ಷಣಾ ನೀತಿಯನ್ನು ಕಡ್ಡಾಯವಾಗಿ ಮಾಡುವುದನ್ನು ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದರು.
ಮಕ್ಕಳ ಅಭಿಪ್ರಾಯಗಳಿಗೆ ಆಡಳಿತ ಮತ್ತು ಜನಪ್ರತಿನಿಧಿಗಳು ಕಿವಿಕೊಡಲು ಮಕ್ಕಳ ಹಕ್ಕುಗಳ ವಾರ್ಡ್ ಸಭಾ, ಗ್ರಾಮಸಭಾ ಮತ್ತು ಮಕ್ಕಳ ಹಕ್ಕುಗಳ ಸಂಸತ್‍ಗಳನ್ನು ನಡೆಸಬೇಕು ಎಂದು ವಾಸುದೇವಶರ್ಮ ಹೇಳಿದರು.

ಹಂಸ ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮಿಸರೋಜ, ಹಂಸ ಸಂಸ್ಥೆಯ ಆಶಾ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ