ಚುನಾವಣೆಗಳಲ್ಲಿ ಬಿಜೆಪಿ, ಸಂಘ ಪರಿವಾರದವರು ಕೋಮು ಸಂಘರ್ಷಗಳನ್ನು ಉಂಟು ಮಾಡುತ್ತಾರೆ – ಮಲ್ಲಿಕಾರ್ಜುನ ಖರ್ಗೆ

ನವದೆಹಲಿ, ಮಾ.17-ಚುನಾವಣೆಗಳಲ್ಲಿ ಬಿಜೆಪಿ, ಸಂಘ ಪರಿವಾರದವರು ಕೋಮು ಸಂಘರ್ಷಗಳನ್ನು ಉಂಟು ಮಾಡುತ್ತಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ 84ನೆ ಮಹಾ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ-ಮುಸ್ಲಿಂ, ದಲಿತ-ಸವರ್ಣೀಯರ ನಡುವೆ ಕೋಮು ವಿಷಬೀಜ ಬಿತ್ತಿ ಸೌಹಾರ್ದತೆಗೆ ಬಿಜೆಪಿ ಧಕ್ಕೆ ಉಂಟು ಮಾಡುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್ ಮೊದಲಿನಿಂದಲೂ ಸೌಹಾರ್ದತೆ ಕಾಪಾಡುವ ಕೆಲಸ ಮಾಡುತ್ತಾ ಬಂದಿದೆ. ನಾವು ಅದಕ್ಕೆ ಮತ್ತಷ್ಟು ಒತ್ತು ಕೊಡುವ ಅಗತ್ಯವಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ಪದೇ ಪದೇ ಚಾಯ್‍ವಾಲಾ ಎಂದು ಕರೆಯುವ ಅಗತ್ಯವಿಲ್ಲ. ನಾನೂ ಕೂಡ ರೈತನ ಮಗನೇ. ಅದನ್ನು ಪದೇ ಪದೇ ಹೇಳುವ ಅಗತ್ಯವಿಲ್ಲ ಎಂದು ಹೇಳಿದರು.
ನಾನು ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದ ಮಾತಿಗೆ ತಪ್ಪಿದ್ದಾರೆ. ತಮ್ಮ ಸ್ನೇಹಿತರನ್ನು ತಿನ್ನಲು ಬಿಟ್ಟು, ವಿದೇಶಕ್ಕೆ ಓಡಿ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಸತ್ಯವನ್ನು ಮರೆ ಮಾಚಿ ಕಾಂಗ್ರೆಸ್ ಮೇಲೆ ಅವರ ಬೆಂಬಲಿಗರು ಆರೋಪ ಮಾಡುತ್ತಿದ್ದಾರೆ ಎಂದು ಖರ್ಗೆ ಹೇಳಿದರು.
70 ವರ್ಷ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ದೇಶದಲ್ಲಿ ದೊಡ್ಡ ದೊಡ್ಡ ಡ್ಯಾಂಗಳ ನಿರ್ಮಾಣ, ಬೃಹತ್ ಕೈಗಾರಿಕೆಗಳ ಸ್ಥಾಪನೆ, ಐಐಎಂ, ಐಎಎಸ್‍ಗಳ ಸ್ಥಾಪನೆ, ಇಸ್ರೋ ಸ್ಥಾಪನೆ ಎಲ್ಲವನ್ನೂ ಕಾಂಗ್ರೆಸ್ ಮಾಡಿದ್ದು ಎಂದು ಹೇಳಿದರು.
ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವವನ್ನು ಕಾಪಾಡಿ ದೇಶವನ್ನು ಸುಭದ್ರಗೊಳಿಸಿದ್ದು ಕಾಂಗ್ರೆಸ್. ಈ ಎಲ್ಲಾ ಉದಾಹರಣೆಗಳನ್ನು ಜನತೆಯ ಮುಂದಿಡಬೇಕು ಎಂದು ಖರ್ಗೆ ಹೇಳಿದರು.  ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಅವರು, ಇದಕ್ಕೂ ಮುನ್ನ ದೇಶದ ಎಲ್ಲಾ ಜನರಿಗೆ ಯುಗಾದಿ ಹಬ್ಬದ ಶುಭಾಶಯ ಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ