ವಾಷಿಂಗ್ಟನ್ :ಮಾ-16: ಉಗ್ರ ನಿಗ್ರಹಕ್ಕಾಗಿ ಅಮೆರಿಕ ಪಾಕಿಸ್ಥಾನದ ಮೇಲೆ ಒತ್ತಡ ಹೇರಿರುವ ಹೊರತಾಗಿಯೂ ಅದು ಅಫ್ಘಾನ್ ಗಡಿಯಲ್ಲಿರುವ ತಾಲಿಬಾನ್ ಉಗ್ರರಿಗೆ ಪರೋಕ್ಷವಾಗಿ, ಕದ್ದು ಮುಚ್ಚಿ, ಬೆಂಬಲ, ಪ್ರೋತ್ಸಾಹ ನೀಡುತ್ತಿದೆ ಎಂದು ಅಮೆರಿಕದ ಸೇನಾ ಮುಖ್ಯಸ್ಥ ಜನರಲ್ ಜೋಸೆಫ್ ಎಲ್ ವೊಟೆಲ್ ಹೇಳಿದ್ದಾರೆ.
ತಾಲಿಬಾನ್ ಉಗ್ರರಿಗೆ ಪಾಕಿಸ್ಥಾನ ಬೆಂಬಲ ನೀಡುವುದನ್ನು ಇನ್ನೂ ಮುಂದುವರಿಸುತ್ತಿದ್ದೆಯೇ ಎಂಬ ಪ್ರಶ್ನೆಗೆ ಸಶಸ್ತ್ರ ಸೇವಾ ಸಮಿತಿಗಳ ಸೆನೆಟ್ ಸಭೆಯಲ್ಲಿ ಉತ್ತರಿಸುತ್ತಿದ್ದ ವೊಟೆಲ್ ಅವರು, “ಈ ವಿಷಯದಲ್ಲಿ ಇಲ್ಲವೇ ಇಲ್ಲ ಎಂದು ನಾನು ಹೇಳಲಾರೆ. ಪಾಕ್ ಸೇನೆಯ ಜತೆಗೆ ನಾವು ನಿರಂತರ ಸಂಪರ್ಕದಲ್ಲಿ ಇದ್ದೇವೆ; ಅದರ ಹೊರತಾಗಿಯೂ ಅಫ್ಘಾನ್ ಗಡಿಯಲ್ಲಿರುವ ತಾಲಿಬಾನ್ ಉಗ್ರರಿಗೆ ಪರೋಕ್ಷ ಪಾಕ್ ಬೆಂಬಲ ಈಗಲೂ ಸಿಗುತ್ತಿದೆ ಎಂದು ನಾನು ಹೇಳಬಯಸುತ್ತೇನೆ’ ಎಂದು ಉತ್ತರಿಸಿದರು.
ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ದಾಳಿಗಳು ಈಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬಗ್ಗೆ ಉತ್ತರಿಸಿದ ವೊಟೆಲ್, “ಪಾಕಿಸ್ಥಾನದಲ್ಲಿ ತಾಲಿಬಾನ್ ಸುರಕ್ಷಿತ ತಾಣಗಳನ್ನು ಹೊಂದಿದೆ; ಈ ಭಾಗದಲ್ಲಿ ಅವರಿಗೆ ಇತರ ಪಾತ್ರಧಾರಿಗಳ ಬೆಂಬಲವೂ ಇದೆ. ಹಾಗಾಗಿ ಭಯೋತ್ಪಾದಕ ದಾಳಿಯಲ್ಲಿ ತಾಲಿಬಾನ್ಗೆ ಯಶಸ್ಸು ಸಿಗುತ್ತಿದೆ’ ಎಂದು ಹೇಳಿದರು.