ಬೆಂಗಳೂರು,ಮಾ.16-ಪ್ರತ್ಯೇಕ ಲಿಂಗಾಯಿತ ಧರ್ಮ ವಿವಾದ ದಿನದಿಂದ ದಿನಕ್ಕೆ ತಿರುಗು ಬಾಣವಾಗುತ್ತಿರುವ ಹಿನ್ನಲೆಯಲ್ಲಿ ಬಹುನಿರೀಕ್ಷಿತ ತಜ್ಞರ ಸಮಿತಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರತ್ಯೇಕ ಲಿಂಗಾಯಿತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ನಿರ್ಣಯವನ್ನು ಸಂಪುಟದ ಕಾರ್ಯಸೂಚಿ( ಅಜೆಂಡಾ)ಯನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡದಂತೆ ಸೂಚಿಸಲಾಗಿದೆ.
ರಾಜ್ಯದ ಸುಮಾರು 50ಕ್ಕೂ ಹೆಚ್ಚು ಮಠಾಧೀಶರು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ನಿವೃತ್ತ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದೆಂದು ಮನವಿ ಮಾಡಿದ್ದರು.
ಒಂದು ವೇಳೆ ನಮ್ಮ ಮನವಿಯನ್ನು ಧಿಕ್ಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದರೆ ಮಠಾಧೀಶರೆಲ್ಲರೂ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ಸಹ ನೀಡಿದ್ದರು.
ಇದರಿಂದ ತುಸು ಬೆದರಿರುವ ಮುಖ್ಯಮಂತ್ರಿ ಅವರು ತಜ್ಞರ ಸಮಿತಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡದಿರಲು ತೀರ್ಮಾನಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಒಂದು ವೇಳೆ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದರೆ ಮಠಾಧೀಶರ ವಿರೋಧದ ಜೊತೆಗೆ ಸಂಪುಟದ ಸಹೋದ್ಯೋಗಿಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಇದೊಂದು ರೀತಿ ಸೆರಗಿನ ಕೆಂಡವಾಗಿರುವುದರಿಂದ ಸದ್ಯಕ್ಕೆ ವಿವಾದವನ್ನು ಮುಂದುವರೆಸದೆ ತಾತ್ಕಾಲಿಕ ವಿರಾಮ ಹಾಕಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಶಿಫಾರಸು ಮಾಡಿದರೂ ಒಂದು ಬಣದ ವಿರೋಧಕ್ಕೆ ಗುರಿಯಾಗಬೇಕಾಗುತ್ತದೆ. ಮಾಡದಿದ್ದರೆ ಮತ್ತೊಂದು ಬಣದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದುವರೆಸುವುದರಲ್ಲಿ ಅರ್ಥವಿಲ್ಲ ಎಂಬ ತೀರ್ಮಾನಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ.
ಕಳೆದ ಸಂಪುಟ ಸಭೆಯಲ್ಲಿ ಇದೇ ವಿಷಯ ಸಂಪುಟದ ಸಹೋದ್ಯೋಗಿಗಳ ನಡುವೆ ತೀವ್ರ ವಿವಾದವನ್ನು ಸೃಷ್ಟಿಸಿತ್ತು. ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಈಶ್ವರ್ ಖಂಡ್ರೆ,ವೀರಶೈವ-ಲಿಂಗಾಯಿತ ಒಂದೇ ಎಂಬ ನಿಲುವಿಗೆ ಅಂಟಿಕೊಂಡಿದ್ದರು.
ಆದರೆ ಸಚಿವರಾದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಶರಣಪ್ರಕಾಶ್ ಪಾಟೀಲ್ ಮತ್ತಿತರರು ವೀರಶೈವವೇ ಬೇರೆ, ಲಿಂಗಾಯಿತವೇ ಪ್ರತ್ಯೇಕ. ಎರಡೂ ಸಮುದಾಯಗಳು ಒಂದೇ ಎಂಬುದು ಸರಿಯಲ್ಲ ಎಂದು ಆಕ್ಷೇಪಿಸಿದ್ದರು.
ಇದು ಸಂಪುಟ ಸಭೆಯಲ್ಲಿ ಸಚಿವರ ನಡುವೆ ವಿವಾದದ ಕಿಡಿ ಹೊತ್ತಿಸಿತ್ತು. ಅಂದೇ ತಜ್ಞರ ಸಮಿತಿಯ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕಾಗಿತ್ತಾದರೂ ಒಮ್ಮತ ಮೂಡದ ಕಾರಣ ಮುಂದೂಡಲಾಗಿತ್ತು.
ಕಳೆದ ಮಂಗಳವಾರ ಸಂಪುಟ ಸಭೆಯನ್ನು ಕೆಲ ಕಾರಣಗಳನ್ನು ನೀಡಿ ಸೋಮವಾರಕ್ಕೆ ಮುಂದೂಡಲಾಗಿತ್ತು. ಇದೀಗ ವಿವಾದದಿಂದ ದೂರ ಉಳಿಯಲು ಸಿದ್ದರಾಮಯ್ಯ ಮುಂದಾಗಿರುವುದರಿಂದ ತಜ್ಞರ ಸಮಿತಿ ನೀಡಿರುವ ವರದಿ ಶೈತ್ಯಗಾರ ಸೇರುವ ಸಂಭವವಿದೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಧರ್ಮ ವಿವಾದವನ್ನು ಮೈ ಮೇಲೆ ಎಳೆದುಕೊಂಡರೆ ಪಕ್ಷಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬುದು ಕಾಂಗ್ರೆಸ್ ನಾಯಕರಿಗೆ ಮನವರಿಕೆಯಾಗಿದೆ.
ಇನ್ನು ಬಿಜೆಪಿ ಕೂಡ ಈ ವಿಷಯದಲ್ಲಿ ಸಾಕಷ್ಟು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಹೈಕಮಾಂಡ್ ಕೂಡ ವಿವಾದವನ್ನು ಮುಂದುವರೆಸುವ ಅಗತ್ಯವಿಲ್ಲ ಎಂದು ಸೂಚಿಸಿದೆ.
ಬಿಜೆಪಿಯ ಜಾಣ ನಡೆ, ಸ್ವಪಕ್ಷೀಯರ ಬೆಂಬಲ ಸಿಗದಿರುವುದು ವಿಧಾನಸಭೆ ಚುನಾವಣೆಯಲ್ಲಿ ತಿರುಗುಬಾಣವಾಗಬಹುದೆಂಬ ಆತಂಕದಿಂದ ಲಿಂಗಾಯತ ಲಡಾಯಿಗೆ ಬ್ರೇಕ್ ಬೀಳುವ ಸಾಧ್ಯತೆಗಳು ನಿಚ್ಚಳವಾಗಿದೆ.