ವಿಧಾನಸಭೆ ಚುನಾವಣೆ: ಬಿಜೆಪಿ ನೂರು ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿ ಯುಗಾದಿ ಬಳಿಕ ಪ್ರಕಟ

ಬೆಂಗಳೂರು, ಮಾ.16- ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಲಿರುವ ಪಕ್ಷದ ನೂರು ಮಂದಿ ಅಭ್ಯರ್ಥಿಗಳ ಮೊದಲ ಕಂತಿನ ಪಟ್ಟಿಯನ್ನು ಯುಗಾದಿ ಮುಗಿದ ಕೂಡಲೇ ಪ್ರಕಟಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.
ಪಕ್ಷದ ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಆಪ್ತ ಪಡೆ ನಡೆಸಿದ ಸಮೀಕ್ಷೆ ಆಧಾರದ ಮೇಲೆ ಈ ಪಟ್ಟಿ ಪ್ರಕಟವಾಗಲಿದೆ ಎಂದು ಹೇಳಿವೆ.

ಈಗಾಗಲೇ ಹಲವು ಸುತ್ತಿನ ಸಮೀಕ್ಷೆಗಳು ಪೂರ್ಣಗೊಂಡಿದ್ದು, ಗೆಲ್ಲಬಲ್ಲ ನೂರು ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಯುಗಾದಿ ಪೂರ್ಣಗೊಂಡ ಕೂಡಲೇ ಪ್ರಕಟಿಸಲು ಅಮಿತ್ ಷಾ ನಿರ್ಧರಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಪರಿವರ್ತನಾ ರ್ಯಾಲಿ ನಡೆಸಿದ ಸಂದರ್ಭದಲ್ಲಿ ಇಂತಹವರಿಗೇ ಟಿಕೆಟ್ ಎಂದು ಘೋಷಿಸಿದರೂ ಅದರಲ್ಲಿ ಅರ್ಧಕ್ಕೂ ಹೆಚ್ಚು ಮಂದಿಗೆ ಟಿಕೆಟ್ ಸಿಗುವುದು ಅನುಮಾನ.

ಏಕೆಂದರೆ ಅಮಿತ್ ಷಾ ಅವರ ಪಡೆ ನಡೆಸಿದ ಸರ್ವೇ ವರದಿಯಲ್ಲಿ ಗೆಲ್ಲುವ ಕ್ಯಾಂಡಿಡೇಟ್‍ಗಳು ಎಂದು ಸೂಚಿಸಿದ ಹೆಸರುಗಳೇ ಬೇರೆ. ಆದರೆ ಯಡಿಯೂರಪ್ಪ ಪ್ರಕಟಿಸಿದ ಹೆಸರುಗಳೇ ಬೇರೆ.
ಈ ಹಿನ್ನೆಲೆಯಲ್ಲಿ ಅಮಿತ್ ಷಾ ಅವರು ಯಡಿಯೂರಪ್ಪ ಅವರ ಜತೆಗೇ ಮಾತುಕತೆ ನಡೆಸಿದ್ದು ನೀವು ಘೋಷಿಸಿದ ಹೆಸರುಗಳು ಪಕ್ಷದ ಅಧಿಕೃತ ಅಭ್ಯರ್ಥಿಗಳ ಪಟ್ಟಿಯಲ್ಲಿ ಇರುತ್ತಾರೆ ಎಂದು ಬಾವಿಸಬೇಡಿ.ಹಲವು ಹೆಸರುಗಳು ಬದಲಾಗಬಹುದು ಎಂದು ಮುನ್ಸೂಚನೆ ನೀಡಿದ್ದಾರೆ.
ಈಗಾಗಲೇ ಕೇಂದ್ರ ಸಚಿವ ಸಂಪುಟದ 25ಕ್ಕೂ ಹೆಚ್ಚು ಮಂದಿ ಸಚಿವರು ಸೇರಿದಂತೆ ನೂರರಷ್ಟು ಮಂದಿ ಪ್ರಮುಖ ನಾಯಕರು ಕರ್ನಾಟಕದ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಬೂತ್ ಮಟ್ಟದ ಸಮಿತಿಗಳು ಆಗಿವೆಯೋ? ಇಲ್ಲವೋ? ಎಂಬುದೂ ಸೇರಿದಂತೆ ಹಲವು ಅಂಶಗಳ ಕುರಿತು ಪರಿಶೀಲನೆ ನಡೆಸಿದ್ದಾರೆ.

ಈ ತಿಂಗಳ ಅಂತ್ಯದೊಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಹೀಗಾಗಿ ಮೂರು ಕಂತುಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದ್ದು ಯುಗಾದಿ ಕಳೆದ ನಂತರ ನೂರು ಮಂದಿಯನ್ನುಳ್ಳ ಎ ಪಟ್ಟಿ ಪ್ರಕಟವಾಗಲಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಗೆಲುವು ಸಾಧಿಸಬಲ್ಲರು ಎಂದು ಬಿಜೆಪಿ ಹೈಕಮಾಂಡ್ ನಂಬಿದ ನೂರು ಮಂದಿ ಅಭ್ಯರ್ಥಿಗಳ ಪಟ್ಟಿ ತೀವ್ರ ಕುತೂಹಲ ಕೆರಳಿಸಿದ್ದು ಈ ನಡೆಯ ಮೂಲಕ ಬಿಜೆಪಿ ಹೈಕಮಾಂಡ್ ತನ್ನ ನಿಲುವಿಗೆ ಪೂರಕವಾಗಿ ನಡೆಯುತ್ತಿದೆ ಎಂಬ ಸಂಗತಿ ಮೂಲ ಬಿಜೆಪಿಗರಲ್ಲಿ ಉತ್ಸಾಹ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ