ನವದೆಹಲಿ, ಮಾ.16-ರಾಜಧಾನಿಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಮಹಾಧಿವೇಶನ (ಪ್ಲೀನರಿ ಸೆಷನ್) ನಡೆಯಲಿದೆ. ಮುಂಬರುವ ಚುನಾವಣೆಗಳು, ಪಕ್ಷದ ಬಲವರ್ಧನೆ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಮಹಾಧಿವೇಶನದಲ್ಲಿ ಬ್ಲಾಕ್ ಮಟ್ಟದ ಅಧ್ಯಕ್ಷರಿಂದ ಎಐಸಿಸಿ ಅಧ್ಯಕ್ಷರವರೆಗೆ ಸರ್ವರು ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದ ನಂತರ ನಡೆಯುತ್ತಿರುವ ಪ್ರಥಮ ಎಐಸಿಸಿ ಅಧಿವೇಶನ ಇದಾಗಿದೆ. ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಎಐಸಿಸಿ ಪದಾಧಿಕಾರಿಗಳು ಭಾಗವಹಿಸುವರು.
ಮಹತ್ವದ ವಿಷಯಗಳ ಸಮಾಲೋಚನೆ :
ದೇಶದಲ್ಲಿ ಕೃಷಿ ಬೆಳವಣಿಗೆ ಕುಂಠಿತ, ರೈತರ ಸರಣಿ ಆತ್ಮಹತ್ಯೆ, ಕೃಷಿಕರ ಬವಣೆ, ನಿರುದ್ಯೋಗ ಸಮಸ್ಯೆ, ಆರ್ಥಿಕ ಹಿಂಜರಿತ, ಕೈಗಾರಿಕೆಗಳ ದುಸ್ಥಿತಿ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಬಗ್ಗೆ ಮಹಾಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಈ ವರ್ಷ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆಯುವ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲೂ ಈ ಅಧಿವೇಶನ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಳ ಬಗ್ಗೆ ಗಹನ ಚರ್ಚೆಯಾಗಲಿದೆ.
ಕೆಲವು ರಾಜ್ಯಗಳಲ್ಲಿ ಇತ್ತೀಚಿನ ಚುನಾವಣೆಗಳು ಮತ್ತು ಉಪ ಚುನಾವಣೆಗಳ ಪರಾಮರ್ಶೆ ಆತ್ಮಾವಲೋಕನಕ್ಕೂ ಈ ಅಧಿವೇಶನ ವೇದಿಕೆಯಾಗಲಿದೆ. ಜೊತೆಗೆ ಚುನಾವಣಾ ಹೋರಾಟದ ರಣತಂತ್ರಗಳನ್ನು ರೂಪಿಸುವ ಬಗ್ಗೆಯೂ ಸಮಾಲೋಚನೆ ನಡೆಯಲಿದೆ. ಎಐಸಿಸಿ ಕಾರ್ಯಕಾರಿ ಸಮಿತಿ ಈಗಾಗಲೇ ಅಧಿವೇಶನದ ರೂಪರೇಷೆಗಳನ್ನು ಸಿದ್ದಪಡಿಸಿದೆ. ಮೂರು ದಿನಗಳ ಮಹಾಧಿವೇಶನವು ಕಾಂಗ್ರೆಸ್ ಚಿಂತನ-ಮಂಥನಕ್ಕೂ ಪೂರಕವಾಗಲಿದೆ. ಸಭೆಯ ಸಮಾರೋಪದ ಕಾರ್ಯಕ್ರಮದಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುವುದು.