ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಆಡಳಿತ ಕಚೇರಿ ಕಟ್ಟಡ ಸಂಪರ್ಕ ಸೌಧ ಉದ್ಘಾಟಿನೆ

ಬೆಂಗಳೂರು, ಮಾ.15- ರಾಜಾಜಿನಗರ ಡಾ.ರಾಜ್‍ಕುಮಾರ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಆಡಳಿತ ಕಚೇರಿ ಕಟ್ಟಡ ಸಂಪರ್ಕ ಸೌಧವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು.
ಒಟ್ಟು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಂಪರ್ಕ ಸೌಧ 7 ಅಂತಸ್ತುಗಳನ್ನು ಹೊಂದಿದ್ದು, 2 ತಳ ಅಂತಸ್ತುಗಳಲ್ಲಿ ಪಾರ್ಕಿಂಗ್ ಸೌಲಭ್ಯ, ನೆಲ ಮತ್ತು 6 ಮೇಲು ಅಂತಸ್ತುಗಳಲ್ಲಿ ವಿವಿಧ ಕಚೇರಿ, ಆಡಿಟೋರಿಯಂ ವ್ಯವಸ್ಥೆ ಮಾಡಲಾಗಿದೆ.
13ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಪಾರ್ಕಿಂಗ್ ಕಲ್ಪಿಸಿದ್ದು, ಒಂದು ಮತ್ತು ಎರಡನೇ ಮಹಡಿಯನ್ನು ಬಾಡಿಗೆಗೆ ನೀಡಲು ಚಿಂತನೆ ನಡೆದಿದ್ದು, 3 ಮತ್ತು 4ನೇ ಮಹಡಿಯಲ್ಲಿ ರಸ್ತೆ ಅಭಿವೃದ್ಧಿ ನಿಗಮದ ಕಚೇರಿ ಕಾರ್ಯ ನಿರ್ವಹಿಸಲಿದೆ.
ಐದು ಮತ್ತು ಆರರಲ್ಲಿ 500 ಆಸನಗಳುಳ್ಳ ಸುಸಜ್ಜಿತ ಸಭಾಂಗಣ ನಿರ್ಮಿಸಲಾಗಿದ್ದು, ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಅಕೌಸ್ಟಿಕ್ ವಿನ್ಯಾಸ ಅಳವಡಿಸಲಾಗಿದೆ.
ಕಟ್ಟಡದಲ್ಲಿ ಮಳೆ ನೀರು ಸಂಗ್ರಹಣೆ ಸೇರಿದಂತೆ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ನಿರ್ಮಿಸಿ ಸಂಸ್ಕರಿಸಿತ ನೀರನ್ನು ಉದ್ಯಾನವನ ಮತ್ತು ಶೌಚಾಲಯಕ್ಕೆ ಬಳಸಲಾಗುವುದು.
ಒಟ್ಟು 40 ಕೋಟಿ ರೂ. ವೆಚ್ಚದಲ್ಲಿ 25ಕೋಟಿಯನ್ನು ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿದ್ದು, ಒಳಾಂಗಣ ವಿನ್ಯಾಸ, ವಿದ್ಯುತ್, ನೀರು, ಹವಾನಿಯಂತ್ರಿತ ವ್ಯವಸ್ಥೆ, ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ಇನ್ನಿತರೆ ಸೌಕರ್ಯಕ್ಕೆ 10.50ಕೋಟಿ ವ್ಯಯಿಸಲಾಗಿದೆ. 4.5ಕೋಟಿ ರೂ. ವೆಚ್ಚದಲ್ಲಿ ಸಭಾಂಗಣ ನಿರ್ಮಿಸಲಾಗಿದೆ.
ಕಟ್ಟಡ ನಿರ್ಮಾಣಗೊಂಡಿರುವ 2,985 ಚದರ ಕಿ.ಮೀ. ಜಾಗವನ್ನು 30 ವರ್ಷಗಳ ಅವಧಿಗೆ ವಾರ್ಷಿಕ 14.75 ಲಕ್ಷ ರೂ. ಬಾಡಿಗೆಗೆ ಲೋಕೋಪಯೋಗಿ ಇಲಾಖೆಯಿಂದ ಪಡೆದುಕೊಳ್ಳಲಾಗಿದೆ.
ರಸ್ತೆ ಅಭಿವೃದ್ಧಿ ನಿಗಮ ರಾಜ್ಯಾದ್ಯಂತ 217 ಸೇತುವೆಗಳನ್ನು 1395.58 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದೆ. ಬೆಂಗಳೂರು ನಗರದಲ್ಲಿ ಹೆಚ್ಚಿರುವ ವಾಹನ ದಟ್ಟಣೆ ನಿರ್ವಹಣೆಗೆ ನಗರದ ಸುತ್ತಮುತ್ತ 150 ಕಿ.ಮೀ. ಉದ್ದದ 4 ರಸ್ತೆಗಳನ್ನು 2095 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಕೆ.ಗೋಪಾಲಯ್ಯ, ಕೆಆರ್‍ಡಿಸಿಎಲ್‍ನ ಅಧ್ಯಕ್ಷ ಪುಟ್ಟರಂಗಶೆಟ್ಟಿ, ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಂ.ಸತ್ಯನಾರಾಯಣ, ಭದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ