ಮಂಗಳೂರು, ಮಾ.15- ಪ್ರಯಾಣಿಕರ ವಿಮಾನವೊಂದು ಮೇಲೇರಲು ಸಜ್ಜಾಗುತ್ತಿದ್ದ ವೇಳೆ ಎಂಜಿನ್ನಲ್ಲಿ ಹಠಾತ್ ದಟ್ಟ ಹೊಗೆ ಕಾಣಿಸಿಕೊಂಡಿದ್ದರಿಂದ ಹಾರಾಟ ರದ್ದಾದ ಘಟನೆ ಬಜ್ಪೆಯಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.
ಇಂಡಿಗೋ ಮತ್ತು ಗೋಏರ್ ವಿಮಾನಗಳ ಎಂಜಿನ್ ದೋಷದಿಂದ ಮುಂಬೈನಲ್ಲಿ ಕಳೆದ ನಾಲ್ಕು ದಿನಗಳಿಂದ ಹಾರಾಟ ಸಂಚಾರ ನಿಲುಗಡೆಯಾಗಿರುವ ಬೆನ್ನಲ್ಲೇ ಮಂಗಳೂರಿನಲ್ಲಿ ಅದೇ ರೀತಿಯ ಘಟನೆ ನಡೆದಿದೆ.
ಬುಧವಾರ ಬೆಳಗ್ಗೆ 8.50ರಲ್ಲಿ 31 ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನ ಮಂಗಳೂರು ಇಂಟರ್ನ್ಯಾಷನಲ್ ಏರ್ಪೆÇೀರ್ಟ್ನಿಂದ ಹೈದರಾಬಾದ್ಗೆ ತೆರಳಬೇಕಿತ್ತು. ಟೇಕ್-ಆಫ್ ಆಗಲು ಸಿದ್ಧವಾಗುತ್ತಿದ್ದಾಗ ವಿಮಾನದ ಎಂಜಿನ್ನಲ್ಲಿ ತಾಂತ್ರಿಕ ದೋಷದಿಂದಾಗಿ ದಟ್ಟ ಹೊಗೆ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಳ್ಳುವ ಆತಂಕ ಸೃಷ್ಟಿಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿ ಶಾಮಕ ಮತ್ತು ತುರ್ತು ಕಾರ್ಯಾಚರಣೆ ವಿಭಾಗದ ಅಧಿಕಾರಿಗಳು ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಇಳಿಸಿ, ಹೊಗೆಯನ್ನು ಶಮನ ಮಾಡಿದರು. ಇದರಿಂದ ಅನಾಹುತ ತಪ್ಪಿದಂತಾಗಿದೆ.