ಬೆಂಗಳೂರು,ಮಾ.15- ವೈದ್ಯಕೀಯ ವೃತ್ತಿ ಪವಿತ್ರವಾಗಿದ್ದು, ವೈದ್ಯರು ದೇವರ ಸ್ವರೂಪರೆಂದು ಹಿರಿಯ ಬಾಹ್ಯಾಕಾಶ ವಿಜ್ಞಾನಿ, ನಿವೃತ್ತ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ಕುಮಾರ್ ತಿಳಿಸಿದರು.
ಇಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜನಸೇವೆ ಮಾಡುವಂತಹ ವೃತ್ತಿ ವೈದ್ಯಕೀಯ ಕ್ಷೇತ್ರವಾಗಿದ್ದು, ಉತ್ತಮ ಆರೋಗ್ಯಕರ ವಾತಾವರಣ ನಿರ್ಮಿಸಲು ಇದೊಂದು ಅದ್ಭುತ ಕೆಲಸವಾಗಿದೆ ಎಂದರು.
ಕಲೆ ಮತ್ತು ವಿಜ್ಞಾನ ಬೇರೆ ಬೇರೆ ಅಲ್ಲ. ಅವರೆಡರಲ್ಲೂ ಸಾಮ್ಯತೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಕಲಾ ನೈಪುಣ್ಯತೆಯೊಂದಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಮಾನವನ ದೈನಂದಿನ ಕೆಲಸಗಳಿಗೆ ವೈಜ್ಞಾನಿಕ ಸಲಕರಣೆಗಳು ಅಗತ್ಯವಿರುವುದರಿಂದ ವಿದ್ಯಾರ್ಥಿಗಳು ಹೆಚ್ಚು ವಿಜ್ಞಾನದತ್ತ ಗಮನಹರಿಸುವುದರ ಜೊತೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಎಲ್ಲವೂ ವಿಜ್ಞಾನವೂ ತಳಹದಿಯ ಮೇಲೆಯೇ ನಿರ್ಮಾಣವಾಗಿರುತ್ತದೆ ಹೇಳಿದರು.
ಪದವಿ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಜಯಂತಿ ಮಾತನಾಡಿ, ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿಯ ಫಲಿತಾಂಶವು ಹೆಚ್ಚಾಗಿದೆ. ಎಂಬಿಬಿಎಸ್ ಪದವಿಯನ್ನು 250 ಮಂದಿ ವಿದ್ಯಾರ್ಥಿಗಳು ಪಡೆದಿದ್ದು , 232 ಮಂದಿ ಸ್ನಾತಕೋತ್ತ ಪದವಿ, 49 ಮಂದಿ ಡಿಪೆÇ್ಲಮೊ ಪದವಿ ಪಡೆದಿದ್ದು, 16 ಮಂದಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಪ್ರಿಯ.ವಿ.ಎಂ ನಾಲ್ಕು ಚಿನ್ನದ ಪದಕವನ್ನು ಪಡೆದಿದ್ದು , ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿರುವುದು ನಮ್ಮ ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ. ಗ್ರಾಮೀಣ ಪ್ರದೇಶದಿಂದ ಬಂದ ಇವರು ನಮ್ಮ ಕಾಲೇಜಿಗೆ ಹೆಸರು ತಂದುಕೊಟ್ಟಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೆ ಇವರು ಮಾದರಿಯಾಗಿದ್ದಾರೆ ಎಂದು ಹೇಳಿದರು.
ಈ ಬಾರಿ ಪದಕ ಪಡೆದ ವಿದ್ಯಾರ್ಥಿಗಳಿಗೆ ನೀಡಬೇಕಾಗಿರುವ 16 ಚಿನ್ನದ ಪದಕಕ್ಕೆ 1.20 ಲಕ್ಷ ವೆಚ್ಚವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ಪಾರ್ಸ್ ಹಾಸ್ಪಿಟಲ್ ವೈದ್ಯ ವೆಂಕಟರಮಣ, ವಾಣಿಜ್ಯ ವಿಲಾಸ್ ಆಸ್ಪತ್ರೆಯ ವೈದ್ಯೆ ಗೀತಾ ಶಿವಮೂರ್ತಿ, ಬಿಎಂಸಿಆರ್ಐ ಫೆಸಿಲಿಟಿ ಆಫೀಸರ್ ಗಿರೀಶ್, ವೈದ್ಯೆ ವಿಜಯಲಕ್ಷ್ಮಿ ಸೇರಿದಂತೆ ಮತ್ತಿತರರು ಇದ್ದರು.