ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಲೆಕ್ಕಾಚಾರಗಳು ಏನೆಂಬುದರ ಬಗ್ಗೆ ತಿಳಿಯದ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಗೊಂದಲ

ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಲೆಕ್ಕಾಚಾರಗಳು ಏನೆಂಬುದರ ಬಗ್ಗೆ ತಿಳಿಯದ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಗೊಂದಲ
ಬೆಂಗಳೂರು,ಮಾ.15- ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಲೆಕ್ಕಾಚಾರಗಳು ಏನೆಂಬುದರ ಬಗ್ಗೆ ತಿಳಿಯದ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಗೊಂದಲದಲಿದ್ದು, ಚಿಂತೆಗೀಡಾಗಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಿದ್ದರೂ ಉತ್ತರ ಕರ್ನಾಟಕ ಭಾಗವನ್ನು ಹೆಚ್ಚು ಕೇಂದ್ರೀಕರಿಸಬೇಕು. ಆದರೆ ಬಿಜೆಪಿ ಅತ್ತ ಗಮನ ಹರಿಸುತ್ತಿಲ್ಲ.
ಜನರP್ಷÁ ಯಾತ್ರೆ ಅಂತ ಕರಾವಳಿ, ಬೆಂಗಳೂರು ರಕ್ಷಿಸಿ ಪಾದಯಾತ್ರೆ ಅಂತ ಬೆಂಗಳೂರು ನಗರದಲ್ಲಿ ಓಡಾಡಿಕೊಂಡು ಇರುವ ರಾಜ್ಯ ನಾಯಕರನ್ನು ಕೇಂದ್ರ ಬಿಜೆಪಿ ನಾಯಕರು ಯಾವ ರೀತಿ ಆಡಿಸುತ್ತಿದ್ದಾರೆ? ಅವರ ಮುಂದಿನ ಯೋಚನೆಗಳು ಏನು? ಉತ್ತರ ಕರ್ನಾಟಕ ಭಾಗದತ್ತ ಯಾಕೆ ಬಿಜೆಪಿ ಗಮನ ಹರಿಸುತಿಲ್ಲ? ಯಾವಾಗ ಹರಿಸಲಿದೆ? ಎಂಬ ಗೊಂದಲಗಳ ನಡುವೆ ತಮ್ಮ ಹೋರಾಟದ ಮೇಲೆ, ಪ್ರಚಾರದ ಮೇಲೆ ಗಮನ ಹರಿಸಲಾಗದೇ ಹೋಗಿದ್ದಾರೆ.
ಚುನಾವಣೆಗೆ 40 ದಿನ ಮುನ್ನವಾದರೂ ದಿನಾಂಕ ಘೋಷಣೆ ಆಗಬೇಕು. ಈಗಿರುವ ಅಂದಾಜಿನ ಪ್ರಕಾರ ಮೇ 5ರ ವೇಳೆಗೆ ಚುನಾವಣೆ ಆಗಲಿದೆ ಎನ್ನಲಾಗುತ್ತಿದೆ. ಅಲ್ಲಿಗೆ ಈ ತಿಂಗಳ ಕೊನೆಯ ಒಳಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಬೇಕು. ಆದರೆ ಇದ್ಯಾವುದರ ಬಗ್ಗೆಯೂ ಅಷ್ಟೊಂದು ಗಂಭೀರವಾಗಿ ಯೋಚಿಸದ ರಾಜ್ಯ ಬಿಜೆಪಿ ನಾಯಕರು, ಕೇಂದ್ರ ನಾಯಕರ ಮಾರ್ಗದರ್ಶನದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇವರ ಮುಂದಿನ ಲೆಕ್ಕಾಚಾರ ಏನು ಎನ್ನುವುದನ್ನು ತಿಳಿಯಲಾಗದೇ ಕಾಂಗ್ರೆಸ್ ನಾಯಕರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.
ಜೆಡಿಎಸ್ ಜತೆ ಮೈತ್ರಿ:
ಶತಾಯಗತಾಯ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಬಿಜೆಪಿ ನಾಯಕರು ಉತ್ತರ ಪ್ರದೇಶ, ಬಿಹಾರದಲ್ಲಿ ನಡೆದ ಲೋಕಸಭೆ ಉಪ ಚುನಾವಣೆಯತ್ತ ಗಮನವನ್ನೇ ಹರಿಸಿಲ್ಲ. ಅಲ್ಲಿನ ಸೋಲು ಯಾವುದೇ ವ್ಯತ್ಯಾಸ ಮೂಡಿಸಿಲ್ಲ. ಅವರ ಗಮನ ಕರ್ನಾಟಕ ಬಿಟ್ಟು ಬೇರೆಡೆ ಇಲ್ಲ ಎನ್ನುವ ಅರಿವಾಗಿದೆ.
ಮಣಿಪುರ, ಗೋವಾ ಹಾಗೂ ಮೊನ್ನೆ ಮೊನ್ನೆ ನಡೆದ ಮೇಘಾಲಯದಲ್ಲಿ ಕೂಡ ಅತಿ ಹೆಚ್ಚು ಸ್ಥಾನ ಗೆದ್ದಿದ್ದರೂ ಸರ್ಕಾರ ರಚನೆ ಮಾಡಲು ಕಾಂಗ್ರೆಸ್‍ಗೆ ಸಾಧ್ಯವಾಗಿಲ್ಲ. ಬಿಜೆಪಿಯ ಏಕಚಕ್ರಾಧಿಪತ್ಯ ಕಾಂಗ್ರೆಸ್‍ಗೆ ಮುಳುವಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಬಿಜೆಪಿ ಜೆಡಿಎಸ್ ಜತೆ ಕೈ ಜೋಡಿಸಲಿದೆ. ತಾನು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಅಧಿಕಾರಕ್ಕೆ ಅವಕಾಶ ಸಿಗುವುದಿಲ್ಲ ಎಂಬ ಅನುಮಾನ ಕಾಂಗ್ರೆಸ್‍ನ್ನು ಕಾಡುತ್ತಿದೆ.
ಅದಾಗಲೇ ಹೈಕಮಾಂಡ್ ನಾಯಕರು ರಾಜ್ಯಸಭೆಯಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ರಾಜ್ಯದಿಂದ ಮೂವರು ಸದಸ್ಯರನ್ನು ಆರಿಸಿ ಕಳಿಸುವಂತೆ ಸೂಚಿಸಿದ್ದಾರೆ. ಇದರಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡುವ ಅವಕಾಶ ಇದ್ದರೂ ಅವರನ್ನು ಎದುರು ಹಾಕಿಕೊಂಡು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಬಿಬಿಎಂಪಿ ಮೈತ್ರಿ ಕೂಡ ಮರೆತಿರುವ ಕಾಂಗ್ರೆಸ್ ನಿಲುವಿಗೆ ಜೆಡಿಎಸ್ ನಾಯಕರು ಬೇಸರಗೊಂಡಿದ್ದಾರೆ.
ಇದೀಗ ಇವರ ಬೇಸರ ಬಿಜೆಪಿ ಕಡೆಗಿನ ಒಲವಾಗಿ ಪರಿವರ್ತನೆಯಾದರೆ ಹೇಗೆ ಎನ್ನುವ ಆತಂಕ ರಾಜ್ಯ ಕಾಂಗ್ರೆಸ್ ನಾಯಕರನ್ನು ಕಾಡಿದೆ. ಆದರೆ, ಇದೆಲ್ಲಕ್ಕೂ ಪರಿಹಾರ ಹುಡುಕಿಕೊಳ್ಳುವಷ್ಟು ಸಮಯವಾಗಲಿ, ಜೆಡಿಎಸ್ ಜತೆಗೆ ಸ್ನೇಹವಾಗಲಿ ಉಳಿದಿಲ್ಲ. ಒಟ್ಟಾರೆ ಹತ್ತು ಹಲವು ಗೊಂದಲಗಳು, ಆತಂಕದ ನಡುವೆ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಿದೆ ಕಾಂಗ್ರೆಸ್. ಬಿಜೆಪಿ ಮಾತ್ರ ಗುಟ್ಟು ಬಿಟ್ಟುಕೊಡದೇ ಕಾರ್ಯಯೋಜನೆ ರೂಪಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ