ಹುಬ್ಬಳ್ಳಿ: ನಾನು ಯಾವುದೇ ಟಿಕೆಟ್ ಗೆ ಅರ್ಜಿ ಹಾಕಿಲ್ಲ. ಬಿಜೆಪಿ ಬಗ್ಗೆ ಅಸಮಾಧಾನವೂ ಇಲ್ಲ ಎಂದು ಉದ್ಯಮಿ, ಮಾಜಿ ಸಂಸದ ಡಾ.ವಿಜಯ್ ಸಂಕೇಶ್ವರ ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭಾ ಟಕೆಟ್ ದೊರಕದ ಹಿನ್ನಲೆಯಲ್ಲಿ ಬಿಜೆಪಿ ತೊರೆಯುತ್ತಿದ್ದಾರೆ ಎನ್ನುವ ಸುದ್ದಿಗೆ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.
ನಾನು ಯಾವುದೇ ಟಿಕೆಟ್ಗೆ ಅರ್ಜಿ ಹಾಕಿಲ್ಲ. ನಾನು 12 ನೇ ವಯಸ್ಸಿನಿಂದ ಆರ್ಎಸ್ಎಸ್ನಲ್ಲಿದ್ದವನು, ನನಗೆ ವಾಜಪೇಯಿ , ಅಡ್ವಾಣಿ ಅವರು 3 ಬಾರಿ ಅರ್ಜಿ ಹಾಕದೆ ಟಿಕೆಟ್ ನೀಡಿದ್ದರು. ಸಚಿವ ಸ್ಥಾನವನ್ನೂ ನೀಡಲು ಮುಂದಾಗಿದ್ದರು ಆದರೆ ನಾನು ಪತ್ರಿಕೆ ಆರಂಭಿಸುವ ಸಲುವಾಗಿ ಬಿಟ್ಟಿದ್ದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ರಾಗಿದ್ದ ಯಡಿಯೂರಪ್ಪ ಅವರು ನನಗೆ ಎಂಎಲ್ಸಿ ಟಿಕೆಟ್ ಕೇಳದೆ ನೀಡಿದ್ದರು. ಮೊನ್ನೆಯೂ ನಿಮ್ಮ ಹೆಸರನ್ನು ಅಂತಿಮಗೊಳಿಸಿದ್ದೇವೆ ಎಂದಿದ್ದರು. ಜಗದೀಶ್ ಶೆಟ್ಟರ್ ಅವರೂ ನನ್ನ ಮತ್ತು ರಾಜೀವ್ ಚಂದ್ರಶೇಖರ್ ಅವರ ಹೆಸರನ್ನು ಅಂತಿಮಗೊಳಿಸಿರುವುದಾಗಿ ದೂರವಾಣಿ ಕರೆ ಮಾಡಿದ್ದರು.ಈಗ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ಅವರು ನನ್ನ ಆತ್ಮೀಯ ಮಿತ್ರ,2 ಬಾರಿ ಪಕ್ಷೇತರರಾಗಿ ರಾಜ್ಯಸಭಾ ಸದಸ್ಯರಾಗಿದ್ದವರು ಅವರು.ಅದು ಸುಲಭದ ಮಾತಲ್ಲ. ಈಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅವರು ನನಗಿಂತ ಹೆಚ್ಚು ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ.ಅವರಿಗೆ ಅನುಭವವೂ ಇದೆ. ಕೇರಳದಲ್ಲಿ ಬಿಜೆಪಿ ಕಟ್ಟಲು ಅವರ ಕೊಡುಗೆಯೂ ಸಿಗಲಿದೆ ಎಂದರು.
ರಾಜೀವ್ ಚಂದ್ರಶೇಖರ್ ಅವರು ಕನ್ನಡಿಗರಲ್ಲ ಎಂದು ಭಾರೀ ಚರ್ಚೆ ನಡೆಯುತ್ತಿದೆ. ಇದನ್ನು ನಾನು ಒಪ್ಪುವುದಿಲ್ಲ. ಅವರ ತಂದೆ ಕನ್ನಡಿಗರು, ಅವರು ಕರ್ನಾಟಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಹಾಡಿ ಹೊಗಳಿದರು.
ನನಗೆ ಬಿಜೆಪಿಯ ಮೇಲೆ ಯಾವುದೇ ಅಸಮಾಧಾನ ಇಲ್ಲ.ಕಾಂಗ್ರೆಸ್ ಹಠಾವೋ ಕರ್ನಾಟಕದಲ್ಲೂ ಆಗಬೇಕು. ನನ್ನ ಮುಂದಿನ ಗುರಿ ಯಡಿಯೂರಪ್ಪನವರನ್ನು ಮತ್ತೆ ಸಿಎಂ ಮಾಡುವುದು, ಜಗತ್ತಿಗೆ ನಾಯಕನಾಗಿರುವ ನರೇಂದ್ರ ಮೋದಿ ಅವರನ್ನು ಮತ್ತೆ ಪಿಎಂ ಮಾಡುವುದು. ಇದಕ್ಕಾಗಿ ನನ್ನ ಹೆಚ್ಚಿನ ಸಮಯ ಮೀಸಲಿಡುತ್ತೇನೆ’ಎಂದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.