ಗೃಹ ಸಚಿವರು ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ – ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು, ಮಾ.13- ಗೃಹ ಸಚಿವರು ಸ್ವತಂತ್ರವಾಗಿ ಕೆಲಸ ಮಾಡಲು ಬಿಡದೆ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಾಗ್ದಾಳಿ ನಡೆಸಿದ್ದಾರೆ.
ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥಶೆಟ್ಟಿ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಆಗದ ರೀತಿಯಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ಸಹಕಾರ ಸರಿಯಾಗಿಲ್ಲ ಎಂದು ಆರೋಪಿಸಿದರು.
ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಹಲ್ಲೆಯಂತಹ ಘಟನೆ ದೇಶದಲ್ಲೇ ಮೊದಲನೆಯದಾಗಿದೆ. ಇಂತಹ ಘಟನೆ ಆಗಬಾರದಿತ್ತು ಎಂದು ವಿಷಾದಿಸಿದರು.
ವಿಶ್ವನಾಥಶೆಟ್ಟಿ ಅವರ ಮೇಲೆ ಹಲ್ಲೆ ನಡೆದ 10 ನಿಮಿಷದಲ್ಲಿ ಆಸ್ಪತ್ರೆಗೆ ಸೇರಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ ಮಾತನಾಡಿದ ವಿಶ್ವನಾಥಶೆಟ್ಟಿ ಅವರ ವೈದ್ಯ ದಿವಾಕರ್, ನ್ಯಾಯಮೂರ್ತಿ ವಿಶ್ವನಾಥಶೆಟ್ಟಿ ಅವರು ಗುಣಮುಖರಾಗುತ್ತಿದ್ದಾರೆ. ನಾಳೆ ಡಿಸ್ಚಾರ್ಜ್ ಆಗುತ್ತಿದ್ದಾರೆ. ಆದರೆ, ಅವರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯುವ ಅಗತ್ಯವಿದೆ ಎಂದರು.
ರಾಜ್ಯ ಸರ್ಕಾರದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಯಾರದೋ ಹಿಡಿತದಲ್ಲಿದ್ದಾರೆ. ಮುಖ್ಯಮಂತ್ರಿಗಳ ಹಿಡಿತದಲ್ಲಿ ಅಧಿಕಾರಿಗಳಿಲ್ಲ. ಆದರೆ, ಬೇರೆ ವ್ಯಕ್ತಿಗಳ ಹಿಡಿತದಲ್ಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ