ಯಾವುದೇ ಕ್ಷಣದಲ್ಲಿ ಚುನಾವಣಾ ನೀತಿ-ಸಂಹಿತೆ ಜಾರಿಯಾಗುವ ಸಾಧ್ಯತೆ – ಮೇಯರ್ ಸಂಪತ್‍ರಾಜ್

ಬೆಂಗಳೂರು, ಮಾ.13- ಯಾವುದೇ ಕ್ಷಣದಲ್ಲಿ ಚುನಾವಣಾ ನೀತಿ-ಸಂಹಿತೆ ಜಾರಿಯಾಗುವ ಸಾಧ್ಯತೆ ಇರುವುದರಿಂದ ಇನ್ನು ಎರಡು ದಿನಗಳೊಳಗೆ ಬಾಕಿ ಇರುವ 2017ನೆ ಸಾಲಿನ ಕಾಮಗಾರಿಗಳ ಆದೇಶ ಪತ್ರವನ್ನು ಹೊರಡಿಸಲೇಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಎಂದು ಮೇಯರ್
ಸಂಪತ್‍ರಾಜ್ ಎಚ್ಚರಿಸಿದರು.
ಪಾಲಿಕೆ ಸಭೆಯಲ್ಲಿ ಮಾತನಾಡಿದ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಅವರು, ನೀತಿ-ಸಂಹಿತೆ ಯಾವ ಕ್ಷಣದಲ್ಲಾದರೂ ಜಾರಿಗೆ ಬರಬಹುದು. ಕಾಮಗಾರಿಗಳ ಆದೇಶ ಪತ್ರ ನೀಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೆ. ಆದರೆ, ಅಧಿಕಾರಿಗಳು ನೀಡಲೇ ಇಲ್ಲ. ಕೂಡಲೇ ಆದೇಶ ಪತ್ರ ಹೊರಡಿಸಿ ಎಂದು ಮನವಿ ಮಾಡಿದರು.
ಈ ಮನವಿಗೆ ಸ್ಪಂದಿಸಿದ ಮೇಯರ್ ಇನ್ನೆರಡು ದಿನಗಳೊಳಗೆ ಎಲ್ಲ ಜೆಸಿಗಳು ಆಯಾ ವ್ಯಾಪ್ತಿಯಲ್ಲಿ ಫೈಲ್‍ಗಳನ್ನು ಪತ್ತೆ ಹಚ್ಚಿ ವರ್ಕ್ ಆರ್ಡರ್ ಕೊಡಬೇಕು. ನಾನೇ ವಲಯಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಯಾರು ವರ್ಕ್ ಆರ್ಡರ್ ಕೊಡಲು ವಿಫಲರಾಗುತ್ತಾರೋ ಅಂತಹವರನ್ನು ಮುಂದಿನ ಸಭೆಯಲ್ಲಿ ಅಮಾನತುಪಡಿಸಲಾಗುವುದು ಎಂದು ಹೇಳಿದರು.
ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಮಾತನಾಡಿ, ಇಂತಹ ಮಹತ್ವದ ವಿಷಯ ನಡೆಯುತ್ತಿದ್ದರೂ ಅಧಿಕಾರಿಗಳು ಭಾಗವಹಿಸುವುದಿಲ್ಲ ಎಂದಾಗ, ಕೂಡಲೇ ಮೇಯರ್ ಸಂಬಂಧಪಟ್ಟ ವಿಶೇಷ ಆಯುಕ್ತರಾದ ಸಾವಿತ್ರಮ್ಮ ಅವರನ್ನು ಸಭೆಗೆ ಬರುವಂತೆ ಹೇಳಿ ಕಳುಹಿಸಿದರು. ಆದರೆ, ಕಾರಣಾಂತರಗಳಿಂದ ಅವರು ಗೈರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಸಾವಿತ್ರಮ್ಮ ಅವರ ಅಧಿಕಾರವನ್ನು ಮತ್ತೊಬ್ಬ ಅಧಿಕಾರಿಗೆ ವಹಿಸಿ ಎರಡು ದಿನಗಳಲ್ಲಿ ಅವರು ವರ್ಕ್ ಆರ್ಡರ್ ಕೊಡುವಂತೆ ಮತ್ತೊಬ್ಬ ಅಧಿಕಾರಿಗೆ ಮೇಯರ್ ಸೂಚಿಸಿದರು.
ಇಮ್ರಾನ್ ನಾಪತ್ತೆ: ನೀತಿ-ಸಂಹಿತೆ ಜಾರಿಯಾಗುವ ಮುನ್ನವೇ ಕಾರ್ಯಾದೇಶ ಕುರಿತು ಮಹತ್ವದ ಚರ್ಚೆ ನಡೆಯುತ್ತಿದ್ದರೂ ಕಾರ್ಯಾದೇಶ ನೀಡಬೇಕಾದ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷ ನಾಪತ್ತೆಯಾಗಿದ್ದರು.
ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ್ ಮಾತನಾಡಿ, ಇಷ್ಟೆಲ್ಲ ಚರ್ಚೆ ನಡೆದಿದೆ. ಇಮ್ರಾನ್ ನಾಪತ್ತೆಯಾಗಿದ್ದಾರೆ. ಅವರು ಇರಬೇಕಿತ್ತು ಎಂದು ಕಿಡಿಕಾರಿದರು.
ಈ ವೇಳೆ ಉಮೇಶ್‍ಶೆಟ್ಟಿ ಮಾತನಾಡಿ, ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಗುಂಡಣ್ಣ ಒಬ್ಬರೆ ಎಲ್ಲಾ ಸಭೆಗೂ ಸರಿಯಾಗಿ ಬರುತ್ತಾರೆ. ಎಲ್ಲ ಕೆಲಸವನ್ನೂ ಅವರಿಗೇ ನೀಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ