ಮೈಸೂರು, ಮಾ.13- ಮುಖ್ಯಮಂತ್ರಿ ಸಿದ್ದರಾಮಯ್ಯ ರಾವಣ, ಅವರ ತಮ್ಮ ಪರಮೇಶ್ವರ್ ವಿಭೀಷಣ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಪ್ರಸಾದ್ ಸಿಎಂಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ಪರಮೇಶ್ವರ್ ಅಣ್ಣ-ತಮ್ಮ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ರಾವಣ-ವಿಭೀಷಣರು ಅಣ್ಣ-ತಮ್ಮಂದಿರು. ಸಿದ್ದರಾಮಯ್ಯ ಹೋಲಿಕೆ ಮಾಡಿರುವುದು ರಾಮ-ಲಕ್ಷ್ಮಣರ ಸಹೋದರತ್ವದ ಬಗ್ಗೆ ಅಲ್ಲ ಎಂದು ಟೀಕಿಸಿದರು. ಪರಮೇಶ್ವರ್ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ. ಇದೇ ರಾವಣನ ಬುದ್ಧಿ. ಅದು ಗೊತ್ತಿದ್ದರೂ ಈಗ ಪರಮೇಶ್ವರ್ ಸುಮ್ಮನಿದ್ದಾರೆ. ಇದು ವಿಭೀಷಣನ ಬುದ್ಧಿ ಎಂದು
ರಾವಣ-ವಿಭೀಷಣರ ಸಹೋದರತ್ವದ ಬಗ್ಗೆ ಹೇಳಿದರು. ಸಿದ್ದರಾಮಯ್ಯ ಹೊಗಳು ಭಟ್ಟರು. ರಾಹುಲ್ಗಾಂಧಿಯ ಶೌಟಿಂಗ್ ಕಮಾಂಡೆಂಟ್ ಆಗಿದ್ದಾರೆ. ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದ ರಾಹುಲ್ಗಾಂಧಿ ಅವರನ್ನು ಮುಂದಿನ ಪ್ರಧಾನಿ ಎಂದು ಹೊಗಳುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರ ನಾನು ಎಂಬ ಅಹಂ ಕಾಂಗ್ರೆಸ್ಗೆ ಮುಳುವಾಗಲಿದೆ. ಇದು ಆಡಳಿತ ವಿರೋಧಿ ಅಲೆಯನ್ನು ದೊಡ್ಡದಾಗಿ ಸೃಷ್ಟಿಸುತ್ತಿದೆ.ನಾನು ಜಿಲ್ಲಾ ಮಂತ್ರಿಯಾಗಿ ಮಾಡಿದ ಕೆಲಸವನ್ನು ತಾನೇ ಮಾಡಿದ್ದು ಎಂದು ಸಿಎಂ ಹೇಳುತ್ತ ಬಂದಿದ್ದಾರೆ. ಇವರ ಆಡಳಿತವನ್ನು ಅರಸರ ಆಡಳಿತಕ್ಕೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ವಾಗ್ದಾಳಿ ಮಾಡಿದರು.