ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಪ್ರಾಬಲ್ಯ ಗಮನಾರ್ಹವಾಗಿ ವೃದ್ಧಿ : ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ

ನವದೆಹಲಿ, ಮಾ.13- ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಪ್ರಾಬಲ್ಯ ಗಮನಾರ್ಹವಾಗಿ ವೃದ್ಧಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮಿತ್ರಪಕ್ಷಗಳ ಸಂಘಟನೆಗೆ ಮುಂದಾಗಿದ್ದು, ಇದೇ ಉದ್ದೇಶದಿಂದ ರಾಜಧಾನಿ ದೆಹಲಿಯಲ್ಲಿಂದು 17 ರಾಜಕೀಯ ಪಕ್ಷಗಳಿಗಾಗಿ ಔತಣಕೂಟವೊಂದನ್ನು ಆಯೋಜಿಸಿದ್ದಾರೆ.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ವರ್ಷ ನಡೆಯುವ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಕಾರ್ಯತಂತ್ರಕ್ಕೆ ಸಜ್ಜಾಗಿರುವ ಸೋನಿಯಾಗಾಂಧಿ, ಈ ಸಂಬಂಧ ಈಗಾಗಲೇ 17 ರಾಜಕೀಯ ಪಕ್ಷಗಳಿಗೆ ಭೋಜನಕೂಟದಲ್ಲಿ ಪಾಲ್ಗೊಳ್ಳಲು
ಆಹ್ವಾನ ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್‍ನ ಪ್ರಭಾವಿ ನಾಯಕ ಸುದೀಪ್ ಬಂಡೋಪಾಧ್ಯಾಯ, ಡಿಎಂಕೆಯ ಕನಿಮೋಳಿ ಮತ್ತು ಸಮಾಜವಾದಿ ಪಕ್ಷದ ರಾಮ್‍ಗೋಪಾಲ್ ಯಾದವ್ ಸೇರಿದಂತೆ ವಿವಿಧ ಪಕ್ಷಗಳ ಅಗ್ರಮಾನ್ಯರು ಈ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಮಿತ್ರಪಕ್ಷ ಸಂಘಟನೆ ಸ್ಪಷ್ಟರೂಪ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಆದರೆ, ಈ ಸಭೆಗೆ ಟಿಡಿಪಿ, ಬಿಜೆಡಿ ಮತ್ತು ಟಿಆರ್‍ಎಸ್ ಪಕ್ಷಗಳಿಗೆ ಅಧಿಕೃತ ಆಮಂತ್ರಣ ನೀಡಿಲ್ಲ.

ಜಾರ್ಖಂಡ್ ವಿಕಾಸ ಮೋರ್ಚಾದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮೊರಾಂಡಿ ಮತ್ತು ಜೆಎಂಎಂನ ಹೇಮಂತ್ ಸೊರೇನ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಹಿಂದೂಸ್ಥಾನಿ ಅವಮ್ ಮೋರ್ಚಾದ ಮುಖ್ಯಸ್ಥ ಜಿತನ್‍ರಾಮ್ ಮುಂಜಿ ಸಹ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಈಗಾಗಲೇ ಖಚಿತಪಡಿಸಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿನಿ ಯಾದವ್ ಅವರು ಕೂಡ ಔತಣಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಎಡಪಕ್ಷದ ಮುಖಂಡರುಗಳಾದ ಸಿಪಿಎಂನ ಸೀತಾರಾಂ ಯಚೋರಿ ಮತ್ತು ಸಿಪಿಐನ ಡಿ.ರಾಜಾ, ಕೇರಳಾ ಕಾಂಗ್ರೆಸ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಮತ್ತು ಆರ್‍ಎಲ್‍ಡಿ ಧುರೀಣರು ಕೂಡ ಸಭೆ ಮತ್ತು ಔತಣಕೂಟದಲ್ಲಿ ಪಾಲ್ಗೊಳ್ಳಲು ಸಮ್ಮತಿ ನೀಡಿದ್ದಾರೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಎಸ್‍ಪಿ ನಾಯಕಿ ಮಾಯಾವತಿ ಆವರಿಗೂ ಆಹ್ವಾನ ನೀಡಲಾಗಿದೆ. ಆದರೆ, ಅವರು ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದ ಜೆಡಿಎಸ್‍ಗೆ ಕರ್ನಾಟಕದಲ್ಲಿ ಬೆಂಬಲ ನೀಡಿರುವುದರಿಂದ ಅವರು ಸಭೆಯಲ್ಲಿ ಭಾಗವಹಿಸುತ್ತಿಲ್ಲ. ನಂ.10 ಜನಪಥ್ ನಿವಾಸ (ಸೋನಿಯಾಗಾಂಧಿ ಅಧಿಕೃತ ನಿವಾಸ) ಇಲ್ಲಿ ಇಂದು ರಾತ್ರಿ ಔತಣ ಕೂಟ ಏರ್ಪಾಡಾಗಿದೆ. ಭೋಜನಕೂಟಕ್ಕೂ ಮುನ್ನ ಸೋನಿಯಾ ಅವರು 17 ಪಕ್ಷಗಳ ಅಗ್ರ ನಾಯಕರೊಂದಿಗೆ ಬಿಜೆಪಿ ಯಶಸ್ಸಿನ ನಾಗಾಲೋಟಕ್ಕೆ ಕಡಿವಾಣ ಹಾಕಲು ಮುಂದೆ ಕೈಗೊಳ್ಳಬಹುದಾದ ಕ್ರಮಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ