ಬೆಂಗಳೂರು, ಮಾ.13- ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ವತಿಯಿಂದ ಗ್ರಾಮೀಣ ರಾಷ್ಟ್ರೀಯ ತೋಟಗಾರಿಕೆ ಮೇಳವನ್ನು ಇದೇ 15ರಿಂದ 17ರವರೆಗೆ ಎರಡು ದಿನಗಳ ಕಾಲ ಹೆಸರುಘಟ್ಟದ ಐಐಎಚ್ಆರ್ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ ಎಂದು ಸಾಮಾಜಿಕ ಶಾಸ್ತ್ರ ಮತ್ತು ತರಬೇತಿ ಮುಖ್ಯಸ್ಥ ಡಾ.ಆರ್.ವೆಂಕಟ್ಕುಮಾರ್ ತಿಳಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳ ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ವಿಜ್ಞಾನ ಕೇಂದ್ರಗಳು ಸರ್ಕಾರೇತರ ಹಾಗೂ ಖಾಸಗಿ ಸಂಸ್ಥೆಗಳು, ಪರಿಕರಗಳು, ಯಂತ್ರೋಪಕರಣ, ಕೊಯ್ಲೇತರ ತಂತ್ರಜ್ಞಾನ ಜತೆಗೆ ಬೇರೆ ಬೇರೆ ಭಾಗಗಳಿಂದ ರೈತರು, ತಂತ್ರಜ್ಞರು ವಿಜ್ಞಾನಿಗಳು ಭಾಗವಹಿಸಲಿದ್ದಾರೆ ಎಂದರು.
ಹಲವಾರು ಇಲಾಖೆ ಸಂಶೋಧನಾ ಸಂಸ್ಥೆಗಳು ಕಂಪೆನಿಗಳು ಹಾಗೂ ಖಾಸಗಿ ರಂಗದವರಿಂದ ವಿಶೇಷ ಮಳಿಗೆಗಳನ್ನು ಏರ್ಪಡಿಸಲಿದ್ದು, ತಂತ್ರಜ್ಞಾನ ಮಾಹಿತಿ, ಪರಿಕರಗಳ ಮಾರಾಟ, ಆಹಾರ ಮಳಿಗೆಗಳು, ಪ್ರತ್ಯೇಕವಾಗಿ ಸಜ್ಜುಗೊಳ್ಳಿಸಿರುವ ತೋಟಗಾರಿಕೆ ಬೆಳೆಗಳು ಹಾಗೂ ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು. ರೈತರಿಗೆ ವಿಜ್ಞಾನಿಗಳು, ಅಧಿಕಾರಿಗಳು, ತಂತ್ರಜ್ಞಾನದಿಂದ ಬೆಳೆಗಳನ್ನು ಬೆಳೆಯುವುದಕ್ಕೆ ಸಲಹೆ ನೀಡಲಾಗುವುದು ಹಾಗೂ ಅವರೊಂದಿಗೆ ಸಂವಾದವನ್ನು ಏರ್ಪಡಿಸಲಾಗಿದೆ. ಮೇಳದಲ್ಲಿ 10ರಿಂದ 12 ಸಾವಿರ ರೈತರು ಭಾಗವಹಿಸಲಿದ್ದಾರೆ.