ಪತ್ರಕರ್ತೆ ಗೌರಿ ಹತ್ಯೆ ಆರೋಪಿಗೆ ಮಂಪರು ಪರೀಕ್ಷೆ

ಬೆಂಗಳೂರು- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ವಶದಲ್ಲಿರುವ ಆರೋಪಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನ ಮಂಪರು ಪರೀಕ್ಷೆಗೆ ಒಳಪಡಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿಸಿದೆ.

ಹೊಟ್ಟೆ ಮಂಜ ಪದೇ ಪದೇ ಹೇಳಿಕೆ ಬದಲಿಸುತ್ತಿದ್ದ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆ ನಡೆಸಲು ಮನವಿ ಮಾಡಿತ್ತು. ಇದೇವೇಳೆ, ಮಾರ್ಚ್ 26ರವರೆಗೂ ಹೊಟ್ಟೆ ಮಂಜನನ್ನ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಎಸ್​ಐಟಿ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಹೊಟ್ಟೆ ಮಂಜನನ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಅಹಮದಾಬಾದ್​ನಲ್ಲಿ ಮಂಪರು ಪರೀಕ್ಷೆ ನಡೆಸುವುದಾಗಿ ನ್ಯಾಯಾಧೀಶರಿಗೆ ಎಸ್ ಐ ಟಿ ಪೊಲೀಸರು ತಿಳಿಸಿದರು. ಈ ಸಂದರ್ಭ ಮಂಪರು ಪರೀಕ್ಷೆಗೆ ಒಳಗಾಗುವುದಾಗಿ ನ್ಯಾಯಾಧೀಶರ ಮುಂದೆ ಹೊಟ್ಟೆ ಮಂಜ ಒಪ್ಪಿಗೆ ಸೂಚಿಸಿದ್ದಾನೆ. ಹೀಗಾಗಿ, ಹೊಟ್ಟೆಮಂಜ ಮತ್ತು ಆತನ ವಕೀಲರ ಸಮ್ಮುಖದಲ್ಲೇ ಮಂಪರು ಪರೀಕ್ಷೆಗೆ ನ್ಯಾಯಾಧೀಶರು ಆದೇಶಿಸಿದರು.

ಮಂಪರು ಪರೀಕ್ಷೆ ವಿಧಾನ ಹೇಗೆ..?:

ಜೈಲಿನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಗುಜರಾತ್, ಹೈದ್ರಾಬಾದ್ ಹಾಗೂ ಅಹಮದಬಾದ್​ನಲ್ಲಿರುವ ಮೂರೂ ಮಂಪರು ಪರೀಕ್ಷೆ ಕೇಂದ್ರಗಳಿಗೆ ವರದಿ ರವಾನೆ ಮಾಡಲಾಗುತ್ತದೆ. ಅಲ್ಲಿನ ವೈದ್ಯರು ವರದಿ ಪರಿಶೀಲಿಸಿ ಮಂಪರು ಪರೀಕ್ಷೆಗೆ ಸಮ್ಮತಿ ಸೂಚಿಸಿದ ಬಳಿಕ ದಿನಾಂಕ‌ ನಿಗದಿಯಾಗಲಿದೆ. ಹೀಗಾಗಿ, ಹೊಟ್ಟೆಮಂಜನ ಮಂಪರು ಪರೀಕ್ಷೆ ನಡೆಯಲು 20 ದಿನಗಳಾದರೂ ಬೇಕಾಗಬಹುದು.

ಇದೇವೇಳೆ, ಪ್ರಕರಣದ ಸಂಬಂಧ ಮಾತ್ರ ಮಂಪರು ಪರೀಕ್ಷೆಯಲ್ಲಿ ಪ್ರಶ್ನೆಗಳನ್ನ ಕೇಳುವಂತೆ ನ್ಯಾಯಾಧೀಶರಿಗೆ ಆರೋಪಿ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದ್ದು, ವೈದ್ಯಕೀಯ ವರದಿ ಹಾಗೂ ಮಂಪರು ಪರೀಕ್ಷೆಗೆ ಸಮಯ ನಿಗದಿಯಾಗಲಿ ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಎಸ್ಐಟಿ ವಿಚಾರಣೆ ವೇಳೆ ನವೀನ್ ಕುಮಾರ್ ತಪ್ಪೊಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ ಎ1 ಆರೋಪಿ ಮಾಡಿ ಎಸ್​ಐಟಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿತ್ತು. ನವೀನ್ ಅಲಿಯಾಸ್ ಹೊಟ್ಟೆ ಮಂಜ ತಪ್ಪೊಪ್ಪಿಗೆ ಹೇಳಿಕೆ ವಿಡಿಯೋ ರೆಕಾರ್ಡ್ ಮಾಡಿದ್ದ ಅಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ, ಕೋರ್ಟ್​ನಲ್ಲೂ ನವೀನ್ ಉಲ್ಟಾ ಹೊಡೆದಿದ್ದ. ಪಂಚರ ಸಮಕ್ಷಮದಲ್ಲಿ ಮಂಪರು ಪರೀಕ್ಷೆಗೆ ಒಪ್ಪಿದ್ದ ಆರೋಪಿ ಬಳಿಕ ನಿರಾಕರಿಸಿದ್ದ. ಹೀಗಾಗಿ, ಮಂಪರು ಪರೀಕ್ಷೆ ನಡೆಸಲು ಎಸ್​ಐಟಿ ನಿರ್ಧರಿಸಿತ್ತು.

ಅಕ್ರಮ ಶಸ್ತ್ರಾಸ್ತ್ರ ಸರಬರಾಜು ಆರೋಪದಡಿ ಉಪ್ಪಾರಪೇಟೆ ಪೊಲೀಸರು ನವೀನ್ ಕುಮಾರ್​ನನ್ನ ಬಂಧಿಸಿದ್ದರು. ಬಂಧನದ ವೇಳೆ 32 ಕ್ಯಾಲಿಬರ್ ಗನ್ ಹಾಗೂ 15 ಜೀವಂತ ಗುಂಡುಗಳು ಪತ್ತೆಯಾಗಿದ್ದವು. ಹೀಗಾಗಿ, ಗೌರಿ ಲಂಕೇಶ್ ಹತ್ಯೆಯಯಲ್ಲಿ ಬಳಸಲಾದ ಶಸ್ತ್ರಾಸ್ತ್ರ ಮತ್ತು ಈತನಿಗೂ ಸಂಬಂಧವಿದೆಯಾ ಎಂಬ ಬಗ್ಗೆ ತನಿಖೆ ನಡೆಸಲು ಎಸ್ಐಟಿ ವಶಕ್ಕೆ ಪಡೆದಿತ್ತು.

ತನಿಖೆ ವೇಳೆ ಸ್ಫೋಟಕ ಮಾಹಿತಿ ಮಾಹಿತಿ ಬಿಚ್ಚಿಟ್ಟಿದ್ದ ಹೊಟ್ಟೆ ಮಂಜ: ಹಿಂದೂಗಳು, ಹಿಂದೂ ದೇವತೆಗಳ ಬಗ್ಗೆ ಗೌರಿ ಹಗುರವಾಗಿ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ವಿಚಾರಣೆ ವೇಳೆ ನವೀನ್ ಕುಮಾರ್ ಹೇಳಿದ್ದನೆಂದು ಎನ್ನಲಾಗುತ್ತಿದೆ. ನವೀನ್ ಕುಮಾರನ ಎತ್ತರ ಮತ್ತು ಪೊಲೀಸರು ಬಿಡುಗಡೆ ಮಾಡಿದ್ದ ಸಿಸಿಟಿವಿ ವಿಡಿಯೋಗೂ ಸಾಮ್ಯತೆಯಿದೆ. ಹಿಂದುತ್ವಕ್ಕೆ ತಲೆ ಕೊಡೋಕು ಸಿದ್ಧ ತಲೆ ತೆಗೆಯೋಕು ಸಿದ್ಧ ಎಂದು ನವೀನ್ ಕುಮಾರ್ ಹೇಳಿದ್ದನೆಂದು ತಿಳಿದು ಬಂದಿದೆ.

ಅಲ್ಲದೇ, ಈತನ ಇಬ್ಬರು ಶಿಷ್ಯಂದಿರಾದ ಅಭಿ ಮತ್ತು ಅನಿ ರೈಫಲ್ ತರಬೇತಿ ಪಡೆದಿದ್ದರು ಎಂಬ ಮಾಹಿತಿಯನ್ನ ಎಸ್ ಐಟಿ ಪತ್ತೆಮಾಡಿದೆ. ಗೌರಿ ಹಂತಕರಿಗೆ ಈತನೇ ಗನ್ ಸರಬರಾಜು ಮಾಡಿದ್ದ ಎಂಬ ಸ್ಪಷ್ಟ ಮಾಹಿತಿಯನ್ನ ಎಸ್​ಐಟಿ ಕಲೆಹಾಕಿದೆ. ಗೌರಿ ಲಂಕೇಶ್ ಹತ್ಯೆ ಮಾಡಿದವರು ಯಾರು..? ಯಾರೆಲ್ಲ ಹತ್ಯೆಗೆ ಬಂದಿದ್ದರು ಎಂಬ ಬಗ್ಗೆಯೂ ನವೀನ್ ಬಳಿ ಮಾಹಿತಿ ಇದೆ ಎಂಬ ಬಗ್ಗೆಯೂ ಎಸ್ಐಟಿ ಮಹತ್ವದ ಮಾಹಿತಿ ಕಲೆಹಾಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ