ಪಾಕಿಸ್ತಾನದ ಪಂಜಾಬ್ ಪ್ರಾಂತವು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನವನ್ನು ನಿಷೇಧಿಸಲು ಆದೇಶಿಸಿದೆ.
ಪಾಕಿಸ್ತಾನ ಮೂಲದ ‘ಡಾನ್’ ವರದಿಯ ಪ್ರಕಾರ, ಶಾಲೆಗಳಲ್ಲಿ ನಡೆಸಲಾಗುತ್ತಿದ್ದ ಪೋಷಕರ ದಿನಾಚರಣೆ, ಶಿಕ್ಷಕರ ದಿನಾಚರಣೆ ಮತ್ತು ಶಾಲಾ ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ನೀಡುತ್ತಿದ್ದ ನೃತ್ಯ ಪ್ರದರ್ಶನಗಳಿಗೆ ನಿಷೇಧಿಸಲಾಗಿದೆ.
ಒಂದು ವೇಳೆ, ಈ ಪ್ರಾಂತ್ಯದ ಶಾಲೆಗಳಲ್ಲಿ ನೃತ್ಯ ಪ್ರದರ್ಶನಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ನಿಡಿದ್ದೇ ಆದಲ್ಲಿ, ಆ ಶಾಲೆಗಳ ಪರವಾನಗಿಯನ್ನು ಶಿಕ್ಷಣ ಇಲಾಖೆ ರದ್ದುಗೊಳಿಸುವುದಾಗಿ ಡಾನ್ ವರದಿ ಮಾಡಿದೆ. ಶಾಲೆಗಳಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ಭಾರತ ಮತ್ತು ಪಾಕಿಸ್ತಾನದ ಗೀತೆಗಳಿಗೆ ನೃತ್ಯ ಮಾಡುವಂತೆ ಹೇಳಲಾಗಿತ್ತು ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
2016 ರಲ್ಲಿ, ಸಿಂಧ್ನಲ್ಲಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರಿಕ್-ಇ-ಇನ್ಸಾಫ್ (ಪಿಟಿಐ) ಸದಸ್ಯರ ನೃತ್ಯ ಕಾರ್ಯಕ್ರಮಗಳು ಮತ್ತು ತರಗತಿಗಳನ್ನು ನಿಷೇಧಿಸಲು ಪ್ರಯತ್ನಿಸಲಾಗಿತ್ತು ಎಂದು ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಹೇಳಿದ್ದು, ಪಾಕಿಸ್ತಾನದ ಸಂವಿಧಾನದ ಪ್ರಕಾರ ಸಂಸ್ಕೃತಿಯನ್ನು ಸಂರಕ್ಷಿಸಿ ಮತ್ತು ಉತ್ತೇಜಿಸಲಾಗುವುದು ಎಂದರು.