ಬೆಂಗಳೂರು, ಮಾ.12- ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಸಾಧನೆ ಕುರಿತ ಮನಿ, ಮೋದಿ ಅಂಡ್ ದ ಮ್ಯಾಜಿಕ್ ಪುಸ್ತಕ ಶೀಘ್ರ ಮಾರುಕಟ್ಟೆಗೆ ಬರಲಿದೆ.
ನೋಟ್ಬ್ಯಾನ್, ಜಿಎಸ್ಟಿ ಜಾರಿ ನಂತರ ಮೋದಿ ಮಾಡಿದ ಮಹಾಕಾರ್ಯವೇನು? ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಮೋದಿ 15 ಲಕ್ಷ ರೂ. ಹಾಕಿದ್ರಾ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಈ ಎಲ್ಲ ಪ್ರಶ್ನೆಗಳಿಗೆ ಉತ್ತರವೆಂಬಂತೆ ಮೋದಿ ಸಾಧನೆ ಕುರಿತ ಮನಿ, ಮೋದಿ ಅಂಡ್ ದ ಮ್ಯಾಜಿಕ್ ಎಂಬ ವಿಶ್ಲೇಷಣಾತ್ಮಕ ಪುಸ್ತಕ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಕಳೆದ ಲೋಕಸಭೆ ಚುನಾವಣೆ ಪೂರ್ವದಲ್ಲಿ ಮೋದಿ ಹುಟ್ಟಿಸಿದ್ದ ನಿರೀಕ್ಷೆಗಳೇನು? 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮೋದಿ ಅವರು ನಾಲ್ಕು ವರ್ಷಗಳಲ್ಲಿ ಮಾಡಿರುವ ಸಾಧನೆ ಏನು? ತಮ್ಮ ಕಾರ್ಯಾನುಷ್ಠಾನದಲ್ಲಿ ಅವರು ಬದ್ಧತೆ ತೋರಿದ್ದಾರಾ ಎಂಬ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ತಜ್ಞರು ಉತ್ತರ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಸೇರಿದಂತೆ ಹಲವರು ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ವಿಜಯ್ಮಲ್ಯ, ನೀರವ್ ಮೋದಿ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಪಾತ್ರವಿರುವ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಖ್ಯಾತ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಅವರು ಮನಿ, ಮೋದಿ ಅಂಡ್ ದ ಮ್ಯಾಜಿಕ್ ಪುಸ್ತಕ ಬರೆದಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಅವರು ಮುನ್ನುಡಿ ಬರೆದಿದ್ದಾರೆ.