ಸ್ಥೈರ್ಯದಿಂದ ಎದುರಿಸಿದಾಗ ಸಿಗುವ ಯಶಸ್ಸನ್ನು ಸಂಭ್ರಮಿಸಿ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ವಿದ್ಯಾರ್ಥಿಗಳಿಗೆ ಕರೆ

ಮೈಸೂರು, ಮಾ.12-ಶೈಕ್ಷಣಿಕ ಸವಾಲುಗಳನ್ನು ಸ್ಥೈರ್ಯದಿಂದ ಎದುರಿಸಿದಾಗ ಸಿಗುವ ಯಶಸ್ಸನ್ನು ಸಂಭ್ರಮಿಸಿ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
98ನೆ ಘಟಿಕೋತ್ಸವದ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಿ ಮಾತನಾಡಿದರು.
ನಿಮ್ಮ ಜೀವನ ಯಾತ್ರೆಯ ಎರಡನೆ ಘಟ್ಟ ಪ್ರಾರಂಭವಾಗಲಿದೆ. ಕೆಲವರು ಶಿಕ್ಷಣ ಮುಂದುವರಿಸಬಹುದು, ಮತ್ತೆ ಕೆಲವರು ವೃತ್ತಿ ಜೀವನ ಪ್ರವೇಶಿಸಬಹುದು. ಏನೇ ಮಾಡಿದರೂ ಅದು ನಿಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುತ್ತದೆ. ನಿಮ್ಮ ಪ್ರಯತ್ನವೆಲ್ಲ ಆ ದಿಕ್ಕಿನಲ್ಲಿ ನಡೆದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.
ಈ ಯಾತ್ರೆಯಲ್ಲಿ ನೀವು ಮುಂದುವರಿದಂತೆ ಹಲವು ಘಟನೆಗಳನ್ನು ಎದುರಿಸಬೇಕಾಗುತ್ತದೆ. ಅದನ್ನು ಧೈರ್ಯವಾಗಿ ಎದುರಿಸಿದರೆ ಮಾತ್ರ ಯಶಸ್ವಿಯಾಗಿ ಬಾಳ ಪಥವನ್ನು ಸಂಭ್ರಮಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ಯಶಸ್ಸಿನ ಹಂತದಲ್ಲಿ ಯೋಜನೆಯನ್ನು ಹಂತ ಹಂತವಾಗಿ ಪೂರೈಸುತ್ತ ಮುನ್ನಡೆಯಬೇಕು. ಮಹತ್ವಾಕಾಂಕ್ಷಿಯ ಏಣಿಯ ಮೆಟ್ಟಿಲುಗಳನ್ನು ಕ್ರಮತಪ್ಪಿ ಜಿಗಿದರೆ ನಿರಾಸೆಯ ಕಹಿ ಬಾಧಿಸಬಹುದು. ಎಚ್ಚರಿಕೆಯಿಂದ ಮುನ್ನಡೆಯಿರಿ ಎಂದು ಸಲಹೆ ಮಾಡಿದರು.
ಯಾವ ಕೋನದಿಂದ ನೋಡಿದರೂ ಶಿಕ್ಷಣ ಒಂದು ನಿರಂತರ ಪ್ರಕ್ರಿಯೆ. ಅದಕ್ಕೆ ಕೊನೆ ಎಂಬುದೇ ಇಲ್ಲ. ಹೀಗಾಗಿ ಜೀವನದುದ್ದಕ್ಕೂ ಎಲ್ಲರೂ ಕಲಿಯುತ್ತಿರುತ್ತಾರೆ ಎಂದು ಹೇಳಿದರು.
ಒಟ್ಟು 27,502 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 17,122 ಮಹಿಳೆಯರು, 10,380 ಪುರುಷರು. ವಿವಿಧ ವಿಷಯಗಳಲ್ಲಿ 575 ವಿದ್ಯಾರ್ಥಿಗಳು ಪಿಎಚ್‍ಡಿ ಪದವಿ ಸೇರಿದಂತೆ ಒಟ್ಟು 348 ಪದಕಗಳು, 168 ಬಹುಮಾನಗಳನ್ನು 207 ವಿದ್ಯಾರ್ಥಿಗಳು ಪಡೆದುಕೊಂಡರು.
7576 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, 19,351 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಪ್ರಭಾರ ಕುಲಪತಿ ಪೆÇ್ರ.ಸಿ.ಬಸವರಾಜು, ರಿಜಿಸ್ಟ್ರಾರ್ ಭಾರತಿ, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ