ಕುಣಿಗಲ್, ಮಾ.12-ನಾನು ಮಂತ್ರಿಯಾಗುತ್ತೇನೆಂಬುದನ್ನು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಅದರಲ್ಲೂ ಮುಜರಾಯಿ ಖಾತೆ ಸಿಕ್ಕಿರುವುದು ನನ್ನ ಪುಣ್ಯದ ಫಲ ಎಂದು ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ತಿಳಿಸಿದರು.
ಯಡಿಯೂರು ಸಿದ್ದಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಮುಜರಾಯಿ ಖಾತೆ ವಹಿಸಿಕೊಂಡ ನಂತರ ರಾಜ್ಯದ ಎಲ್ಲ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಿ ಕೋಟ್ಯಂತರ ರೂ. ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಇದು ನನ್ನ ಮನಸ್ಸಿಗೆ ನೆಮ್ಮದಿ ತಂದಿದೆ ಎಂದರು.
ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಮುಜರಾಯಿ ಖಾತೆ ನಿಭಾಯಿಸಬೇಕಾದರೆ ಸಾಕಷ್ಟು ಅವಧಿ ಬೇಕಾಗುತ್ತದೆ. ನಾನು ಸಚಿವನಾದ ಮೇಲೆ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿ ಆದಾಯ ಮತ್ತು ಖರ್ಚು-ವೆಚ್ಚದ ಲೆಕ್ಕ ಕೊಡಲು ಆಡಳಿತ ಮಂಡಳಿ ಮೀನಾಮೇಷ ಎಣಿಸುತ್ತಿತ್ತು. ಆಗ ಪ್ರತಿ ದೇವಾಲಯದಲ್ಲಿ ಆಡಿಟ್ ನಡೆಸುವಂತೆ ಹೇಳಿದಾಗ ಸಾಕಷ್ಟು ಹಣ ಇರುವುದು ಕಂಡುಬಂದಿದೆ ಎಂದರು.
ಶಾಸಕ ಡಿ.ನಾಗರಾಜಯ್ಯ ಮಾತನಾಡಿ, ದೇವಸ್ಥಾನಗಳ ಜೀರ್ಣೋದ್ಧಾರದಿಂದ ಸೌಹಾರ್ದತೆ, ಶಾಂತಿ-ಸುವ್ಯವಸ್ಥೆ ಕಾಪಾಡಬಹುದು. ಸರ್ಕಾರದಿಂದ ಹಣ ಮಂಜೂರು ಮಾಡಿದರೂ ಕೂಡ ಕೆಲವು ಲೋಪದೋಷಗಳಿಂದ ವಾಪಸ್ ಹೋಗಿದೆ. ರಾಜಕೀಯದ ವೈಮನಸ್ಸುಗಳಿಂದಾಗಿ ಈ ರೀತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹನುಮಂತಯ್ಯ, ಗ್ರಾಪಂ ಅಧ್ಯಕ್ಷೆ ಸುಮಾ, ವ್ಯವಸ್ಥಾಪಕ ಮಂಡಳಿ ಅಧ್ಯಕ್ಷೆ ಶ್ರೀದೇವಿ, ಕಾರ್ಯನಿರ್ವಹಣಾಧಿಕಾರಿ ಆರತಿ ಆನಂದ್ ಪಾಲ್ಗೊಂಡಿದ್ದರು.