ಬೆಂಗಳೂರು, ಮಾ.12- ನಾವು ರಾಜ್ಯಸಭೆ ಚುನಾವಣೆಗೆ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮೂರು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲೆರಡು ಅಭ್ಯರ್ಥಿಗಳ ಜತೆಗೆ ಮೂರನೇ ಅಭ್ಯರ್ಥಿಯನ್ನೂ ನಾವು ಗೆಲ್ಲುತ್ತೇವೆ ಎಂದು ಹೇಳಿದರು.
ಮೊದಲೆರಡು ಅಭ್ಯರ್ಥಿಗಳಿಗೆ ಮತ ಚಲಾಯಿಸಿದ ನಂತರ ಉಳಿದ ಮತಗಳು ಸಹ ಶಾಸಕರ ಮತ ಕಾಂಗ್ರೆಸ್ಗೆ ಸೇರ್ಪಡೆಗೊಂಡವರ ಮತಗಳೂ ಸೇರಿದಂತೆ 37 ಮತಗಳು ಹೆಚ್ಚುವರಿಯಾಗಿ ನಮಗೆ ಲಭ್ಯವಾಗುತ್ತವೆ. ಹಾಗಾಗಿ ಮೂರನೇ ಸ್ಥಾನವನ್ನೂ ಕೂಡ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂದು ಹೇಳಿದರು.
ಮೂರನೇ ಅಭ್ಯರ್ಥಿಯನ್ನು ಮೈತ್ರಿಯಾಗಿ ಕಣಕ್ಕಿಳಿಸಿದ ಸಂಬಂಧ ಎಚ್.ಡಿ.ಕುಮಾರಸ್ವಾಮಿ ಅವರಾಗಲಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಾಗಲಿ ನನ್ನ ಜತೆ ಚರ್ಚೆ ಮಾಡಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರ ಅನುಮತಿ ಪಡೆದು ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಎಲ್.ಹನುಮಂತಯ್ಯ, ನಾಸೀರ್ ಹುಸೇನ್, ರಾಜಕೀಯ ಕಾರ್ಯದರ್ಶಿಯಾದ ಜಿ.ಸಿ.ಚಂದ್ರಶೇಖರ್ ಅವರು ಅಭ್ಯರ್ಥಿಗಳಾಗಿದ್ದಾರೆ. ಯುವಕರಿಗೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕೆಂಬ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಈ ಮೂವರಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಪರಮೇಶ್ವರ್ ಹೇಳಿದರು.
ಐಪಿಎಸ್ ಅಧಿಕಾರಿಗಳು ನಿಮ್ಮ ಸರ್ಕಾರದ ವಿರುದ್ಧ ಸಿಡಿದೆದ್ದು, ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೇನೂ ಗೊತ್ತಿಲ್ಲ. ನಲಪಾಡ್, ನಾರಾಯಣಸ್ವಾಮಿ ಪ್ರಕರಣದಲ್ಲಿ ಸರ್ಕಾರ ಕಾನೂನು ರೀತಿ ಕ್ರಮ ಕೈಗೊಂಡಿದೆ. ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಿದೆ ಎಂದು ಹೇಳಿದರು.