ಮತ್ತೊಬ್ಬರಿಗೆ ಸಹಾಯ ಮಾಡುವುದು ಮತ್ತು ಕೊಡುಗೆ ನೀಡುವುದು ಮಾನವ ಜೀವನದ ಅವಿಭಾಜ್ಯ ಅಂಗ. ಡಾ. ಶ್ರೀ ಚಂದ್ರಶೇಖರ ಗುರೂಜಿ

ಬೆಂಗಳೂರು, ಮಾ.12- ಮತ್ತೊಬ್ಬರಿಗೆ ಸಹಾಯ ಮಾಡುವುದು ಮತ್ತು ಕೊಡುಗೆ ನೀಡುವುದು ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ನೈಸರ್ಗಿಕವಾದ ನಿಯಮವಾಗಿದೆ. ನಾವು ಹೆಚ್ಚು ಸಹಾಯ ಮಾಡಿದಷ್ಟೂ ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚು ಸಮೃದ್ಧಿ ಮತ್ತು ಆನಂದ ಪಡೆಯುತ್ತೇವೆ ಎಂದು ಸರಳ ಪರಿವಾರದ ಡಾ. ಶ್ರೀ ಚಂದ್ರಶೇಖರ ಗುರೂಜಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸರಳ ಪರಿವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಜಗತ್ತಿನಲ್ಲಿ ಬಹುತೇಕ ಜನರು ತಮ್ಮ ವೈಯಕ್ತಿಕ ಹಿತಾಸಕ್ತಿ ಅಥವಾ ಬೆಳವಣಿಗೆ ಬಗ್ಗೆ ಆಸಕ್ತಿ ತೋರುತ್ತಿದ್ದು, ನೈಸರ್ಗಿಕ ತತ್ವಗಳನ್ನು ಮರೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಆನಂದ ಎನ್ನುವುದು ನಮ್ಮಲ್ಲಿಯೇ ಇರುತ್ತದೆ. ಇದಕ್ಕಾಗಿ ನಾವು ಹೊರಗಡೆ ಹುಡುಕಬೇಕಾದ ಅಗತ್ಯವಿಲ್ಲ. ನಾವು ಆನಂದವಾಗಿರಬೇಕಾದರೆ ನಮ್ಮಲ್ಲಿ ಸತ್ಯಸ್ವರೂಪದ ಮನೋಭಾವ ಇರಬೇಕು ಎಂದರು.
ಹದಿನೆಂಟು ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘವಾಗಿ ನಿರ್ದೇಶನ, ಶಕ್ತಿ, ಸಂರಚನೆ ಮತ್ತು ಚಕ್ರಗಳನ್ನು ಅಧ್ಯಯನ ಮತ್ತು ಸಂಶೋಧನೆ ಮಾಡಿದ್ದು, ಈ ಸಂಶೋಧನೆಯಿಂದಾಗಿ ನಿಜವಾದ ರೂಪ ಬರಲು ಸಾಧ್ಯ ಎಂಬುದನ್ನು ಸಾದರಪಡಿಸಬಹುದಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಡಾ.ಶ್ರೀ ಚಂದ್ರಶೇಖರ ಗುರೂಜಿ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಅಭಿಮಾನಿಗಳು ಗುರೂಜಿ ಅವರ ಮನುಕುಲದ ಒಳಿತಿನ ಸಿದ್ಧಾಂತವನ್ನು ಅನುಮೋದಿಸಿ, ಸಮಾಜದ ಒಳಿತಿಗಾಗಿ ಬದುಕುವ ಪ್ರತಿಜ್ಞೆ ಸ್ವೀಕರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ