ಲಖನೌ:ಮಾ-11: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಪ್ರತಿನಿಧಿಸುತ್ತಿರುವ ಗೋರಖ್ಪುರ, ಫುಲ್ಪುರ ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಬಿಹಾರದ ಒಂದು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಮತದಾನ ಆರಂಭವಾಗಿದೆ.
ಆರ್ ಜೆಡಿ ಸಂಸದ ಮೊಹಮ್ಮದ್ ತಸ್ಲೀಮುದ್ದಿನ್ ಅವರ ಅಕಾಲಿಕ ನಿಧನದಿಂದಾಗಿ ಬಿಹಾರದ ಆರಾರಿಯಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.
ಇನ್ನು ಗೋರಖ್ ಪುರದಲ್ಲಿ ಸಿಎಂ ಯೋಗಿ ಆದಿತ್ಯನಾಥ ಹಾಗೂ ಫುಲ್ಪುರದಲ್ಲಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಬೆಳಗ್ಗೆ ಮತಗಟ್ಟೆಗೆ ಬಂದು ಮತದಾನ ಚಲಾಯಿಸಿದರು.
ಬಿಜೆಪಿಗೆ ಉತ್ತರಪ್ರದೇಶದ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಬಿಜೆಪಿ ಮಣಿಸಲು ಸಮಾಜವಾದಿ ಪಕ್ಷದ ಅಭ್ಯರ್ಥಿಗೆ ಬಹುಜನ ಸಮಾಜವಾದಿ ಪಕ್ಷ ಬೆಂಬಲ ಸೂಚಿಸಿದೆ. ಎರಡೂ ಕಡೆ ಕಾಂಗ್ರೆಸ್ ಸ್ವಂತ ಬಲದ ಮೇಲೆ ಸ್ಪರ್ಧೆ ಎದುರಿಸಿದೆ. ಮಾರ್ಚ್ 14ರಂದು ಮತ ಎಣಿಕೆ ನಡೆಯಲಿದೆ.
ಗೋರಖ್ಪುರದಲ್ಲಿ ಐದು ಬಾರಿ ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ಪ್ರಭಾ ಈ ಕ್ಷೇತ್ರದಲ್ಲಿ ಸಾಕಷ್ಟಿದೆ. ಆದರೆ ಕಳೆದ ವರ್ಷದ ಆಗಸ್ಟ್ನಲ್ಲಿ ಗೋರಖ್ಪುರದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 70 ಶಿಶುಗಳು ಮೃತಪಟ್ಟ ಪ್ರಕರಣದ ನಂತರ ಜನರಲ್ಲಿ ಸ್ಥಳೀಯ ಆಡಳಿತದ ಬಗ್ಗೆ ಆಕ್ರೋಶವಿದೆ. ಇನ್ನು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಫುಲ್ಪುರ, ಫಫಾಮಾವೋ, ಅಲಹಾಬಾದ್ ಉತ್ತರ, ಅಲಹಾಬಾದ್ ಪಶ್ಚಿಮ, ಸೋರಾವೊನ್ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ವಶದಲ್ಲಿವೆ. ಗೋರಖ್ಪುರದಲ್ಲಿ 10, ಫುಲ್ಪುರದಲ್ಲಿ 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ವಿಶೇಷವಾಗಿ ಫುಲ್ಪುರ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೆಚ್ಚಿನ ಕ್ಷೇತ್ರ. ನೆಹರು ಅವರು 1952, 1957 ಮತ್ತು 1962ರಲ್ಲಿ ಈ ಕ್ಷೇತ್ರದಿಂದಲೇ ಲೋಕಸಭೆ ಪ್ರವೇಶಿಸಿದ್ದರು. ನೆಹರು ನಿಧನದಿಂದಾಗಿ ನಡೆದ 1964ರ ಉಪ ಚುನಾವಣೆ ಹಾಗೂ 1967ರ ಚುನಾವಣೆಯಲ್ಲಿ ಕಾಂಗ್ರೆಸ್ನ ವಿಜಯಲಕ್ಷ್ಮೇ ಪಂಡಿತ್ ಜಯ ಗಳಿಸಿದರು. 1980ರ ದಶಕದ ತರುವಾಯ ಜನತಾ ಪಕ್ಷ, ಜನತಾ ದಳ, ಸಮಾಜವಾದಿ ಪಕ್ಷ ದ ಅಭ್ಯರ್ಥಿಗಳು ಜಯ ಗಳಿಸಿದೆ.
UP, Bihar,Mega Bypolls