ರಾಜಕೀಯ ರಂಗ ಸಜ್ಜುಗೊಳಿಸಿ ಮತ್ತೆ ಹಿಮಾಲಯಕ್ಕೆ ತೆರಳಿದ ಸೂಪರ್ ಸ್ಟಾರ್ ರಜನಿಕಾಂತ್

ಚೆನ್ನೈ:ಮಾ-11: ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಕುರಿತು ನಿರ್ಧಾರ ಪ್ರಕಟಿಸಿ, ರಂಗ ಸಜ್ಜುಗೊಳಿಸಿ ಇನ್ನೇನು ರಜನಿ ತಮ್ಮ ರಾಜಕೀಯ ಪಕ್ಷದ ಬಗ್ಗೆ ಸ್ಪಷ್ಟನೆ ನೀಡುತ್ತಾರೆ ಎಂದು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿರುವ ವೇಳೆ ರಜನಿಕಾಂತ್‌ ಮತ್ತೆ ಹಿಮಾಲಯದತ್ತ ಮುಖ ಮಾಡಿದ್ದಾರೆ.

ಆಗಾಗ್ಗೆ ಹಿಮಾಲಯಕ್ಕೆ ಹೋಗಿ ಧ್ಯಾನಮಗ್ನರಾಗುವ ಅಭ್ಯಾಸ ಹೊಂದಿರುವ ರಜನಿ ಶನಿವಾರ ಚೆನ್ನೈನಿಂದ ಉತ್ತರಾಖಂಡ್‌ನ ದುನಾಗಿರಿಗೆ ತೆರಳಿದ್ದಾರೆ. ದುನಾಗಿರಿಯಲ್ಲಿ ರಜನಿಕಾಂತ್‌ ಅವರು ಧ್ಯಾನ ಹಾಗೂ ಸಂತರ ಜತೆ ಕಾಲ ಕಳೆಯಲಿದ್ದಾರೆ ಎಂದು ಹೇಳಲಾಗಿದೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಕ್ಲುಪ್ತವಾಗಿಯೇ ಉತ್ತರಿಸಿದ ಸೂಪರ್‌ ಸ್ಟಾರ್‌, ”ಸುಮಾರು 2 ವಾರಗಳ ಕಾಲ ದೂರ ಇರಲಿದ್ದೇನೆ,” ಎಂದಷ್ಟೇ ಹೇಳಿದ್ದಾರೆ.

ಈ ಹಿಂದೆಯೂ ಬಿಗ್‌ ಬಜೆಟ್‌ ಚಿತ್ರಗಳ ಬಿಡುಗಡೆಗೆ ಮುನ್ನ ರಜನಿ ಅವರು ಹಿಮಾಲಯಕ್ಕೆ ತೆರಳಿ ವಾಪಸಾಗುತ್ತಿದ್ದರು. ಈ ವರ್ಷ ‘ಕಾಲಾ’ ಮತ್ತು ‘2.0’ ಸಿನಿಮಾ ತೆರೆ ಕಾಣಲಿವೆ. ಜತೆಗೆ ಸದ್ಯದಲ್ಲೇ ರಾಜಕೀಯ ಪಕ್ಷ ಘೋಷಿಸುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ರಜನಿ ಹಿಮಾಲಯ ಭೇಟಿ ಕುತೂಹಲ ಮೂಡಿಸಿದೆ.

ಭಾರತೀಯ ಯೋಗೋದ ಸತ್ಸಂಗ ಸೊಸೈಟಿ’ಯ (ವೈಎಸ್‌ಎಸ್‌) ಶತಮಾನೋತ್ಸವದ ಅಂಗವಾಗಿ ರಜನಿ ಅವರು ತಮ್ಮ ಸ್ನೇಹಿರೊಂದಿಗೆ ಸೇರಿ ಇಲ್ಲಿ ನಿರ್ಮಿಸಿರುವ ಧ್ಯಾನಕೇಂದ್ರದಲ್ಲೂ ಸೂಪರ್‌ಸ್ಟಾರ್‌ ಕೆಲಕಾಲ ತಂಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪರಮಹಂಸ ಯೋಗಾನಂದ ಅವರು 1917ರಲ್ಲಿ ‘ವೈಎಸ್‌ಎಸ್‌’ ಸ್ಥಾಪಿಸಿದ್ದರು.

Rajinikanth, leaves for Himalayas,annual spiritual pilgrimage

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ