ಝಾನ್ಸಿ, ಮಾ.11-ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯ ಕಾಲನ್ನು ಕತ್ತರಿಸಿದ ವೈದ್ಯನೊಬ್ಬ ಅದನ್ನು ಗಾಯಾಳು ತಲೆಗೆ ಆಧಾರವಾಗಿ (ದಿಂಬಿನಂತೆ) ಇಟ್ಟ ವಿಚಿತ್ರ ಘಟನೆ ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಝಾನ್ಸಿ ಮಹಾರಾಣಿ ಲಕ್ಷ್ಮೀಬಾಯಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ(ಐಸಿಯು) ಗಾಯಾಳು ಕಾಲನ್ನೇ ತಲೆದಿಂಬಾಗಿ ಬಳಸಿರುವ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಘನಶ್ಯಾಂ(28) ಎಂಬ ವ್ಯಕ್ತಿ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ. ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಶನಿವಾರ ಸಂಜೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಪಘಾತದಲ್ಲಿ ಕಾಲು ತುಂಡಾಗಿತ್ತು. ಆಸ್ಪತ್ರೆಯಲ್ಲಿ ದಿಂಬು ಲಭ್ಯವಿಲ್ಲದ ಕಾರಣ ಗಾಯಾಳು ಕಾಲನ್ನೇ ಆತನ ತಲೆಗೆ ಆಧಾರವಾಗಿಟ್ಟು, ಚಿಕಿತ್ಸೆ ನೀಡಲಾಗಿದೆ. ಈ ಪ್ರಕರಣ ಈಗ ವಿವಾದಕ್ಕೆ ಕಾರಣವಾಗಿದ್ದು, ತನಿಖೆಗೆ ನಾಲ್ವರು ಅಧಿಕಾರಿಗಳ ಸಮಿತಿ ರಚಿಸಲಾಗಿದೆ.