
ಬೆಂಗಳೂರು, ಮಾ.10- ಧನದಾಹಿ ಆ್ಯಂಬುಲೆನ್ಸ್ ಕರ್ಮಕಾಂಡವನ್ನು ಯುವಕನೊಬ್ಬ ಬೆಂಗಳೂರಿನಲ್ಲಿ ಬಯಲಿಗೆಳೆದು ಜನ್ಮಜಾಲಾಡಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್ನಲ್ಲಿ ಅಮಾಯಕರೊಬ್ಬರು ತಮ್ಮ ಸಂಬಂಧಿಕರ ಶವ ಸಾಗಿಸುತ್ತಿದ್ದಾಗ, ಧನದಾಹಿ ಆ್ಯಂಬುಲೆನ್ಸ್ ಚಾಲಕನ ವರ್ತನೆ ಹಾಗೂ ಅಮಾಯಕನ ಅಸಹಾಯಕತನವನ್ನು ಈ ಯುವಕ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾನೆ.
ಆ್ಯಂಬುಲೆನ್ಸ್ ಚಾಲಕನ ವರ್ತನೆ ವಿರುದ್ಧ ಕಿಡಿಕಾರಿ ಸಾರ್ವಜನಿಕವಾಗಿ ಹರಿಹಾಯ್ದಿದ್ದಾನೆ.
ನಿನ್ನೆ ಶವಪರೀಕ್ಷೆ ನಂತರ ಎಸ್ಎಲ್ಡಬ್ಲ್ಯು ಆ್ಯಂಬುಲೆನ್ಸ್ ಸರ್ವೀಸ್ ಕೆಎ-05 -ಎಎಫ್0254 ನಂಬರ್ ವಾಹನದಲ್ಲಿ ಶವ ಸಾಗಿಸಲಾಗಿದೆ. ಶವ ಪರೀಕ್ಷೆ ಸಂದರ್ಭದಲ್ಲೇ ಸಂಬಂಧಿಕರ ಎಲ್ಲಾ ಹಣ ಖಾಲಿ ಆಗಿದೆ. ಆ್ಯಂಬುಲೆನ್ಸ್ನಲ್ಲಿ ಶವ ಸಾಗಿಸಬೇಕಾಗಿದ್ದು, ಕೇವಲ ಮೂರು ಕಿಲೋ ಮೀಟರ್ ದೂರಕ್ಕೆ ಈ ಚಾಲಕ ಎರಡೂವರೆ ಸಾವಿರ ರೂ. ಕೇಳಿದ್ದಾನೆ. ಇದಲ್ಲದೆ ಪೆÇೀಸ್ಟ್ ಮಾರ್ಟಂ ಮಾಡಿದ ಡಾಕ್ಟರಿಗೆ 500 ರೂ., ಗೇಟ್ ತೆಗೆದವನಿಗೆ 500 ರೂ. ಕೊಟ್ಟು ಶವ ಆ್ಯಂಬುಲೆನ್ಸ್ನಲ್ಲಿ ತೆಗೆದುಕೊಂಡು ಬರಲಾಗಿದೆ.
ಆ್ಯಂಬುಲೆನ್ಸ್ ಚಾಲಕ ಹಣ ಕೊಡಲು ಒಪ್ಪದ್ದಕ್ಕೆ ಅವರ ಬಳಿ ಗಲಾಟೆ ಶುರುವಿಟ್ಟುಕೊಂಡಿದ್ದಾನೆ. ಮೊದಲೇ ಸಾವಿನ ದುಃಖದಲ್ಲಿದ್ದವರು ಕೊಡಲು ಹಣವಿಲ್ಲ, ಅದು ಕೇವಲ ಮೂರು ಕಿಲೋಮೀಟರ್ಗಳಿಗೆ ಎರಡೂವರೆ ಸಾವಿರ ರೂ. ಹಣ ಕೊಡಬೇಕಾಗಿದೆ. ಆಗ ಯುವಕನೊಬ್ಬ ಚಾಲಕನ ವರ್ತನೆಯನ್ನು ತೀವ್ರವಾಗಿ ಪ್ರತಿರೋಧಿಸಿದ.
ಇಷ್ಟೊಂದು ಅನ್ಯಾಯ, ಹಗಲುದರೋಡೆ ನಡೆಯುತ್ತಿದೆ. ಕೇವಲ ಮೂರು ಕಿಲೋ ಮೀಟರ್ ದೂರಕ್ಕೆ ಎರಡೂವರೆ ಸಾವಿರ ರೂ. ಪಡೆಯುವುದು ಎಷ್ಟು ಸಮಂಜಸ. ನಿಮಗೆ ಯಾರು ಹೇಳುವವರು, ಕೇಳುವವರು ಇಲ್ಲವೇ? ನೋಡಿ… ಇವರ ಪಾಡೇನು?
ಈ ಬಡ ವ್ಯಕ್ತಿಯ ಹತ್ತಿರ ಬಟ್ಟೆ ಹಾಕಿಕೊಳ್ಳಲು ಹಣವಿಲ್ಲ, ಆ್ಯಂಬುಲೆನ್ಸ್ಗೆ ಹಣ ಕೊಡಬೇಡಿ ಎನ್ನುತ್ತಿಲ್ಲ. ಆದರೆ ಮೂರು ಕಿಲೋ ಮೀಟರ್ ದೂರಕ್ಕೆ ಎರಡೂವರೆ ಸಾವಿರಾನಾ… ಎಂದು ಪ್ರಶ್ನಿಸಿದ್ದಕ್ಕೆ, ಆ್ಯಂಬುಲೆನ್ಸ್ ಚಾಲಕ ಪ್ರತಿಕ್ರಿಯಿಸಿ, ಇದು ಬೆಂಗಳೂರು ಗುರೂ…. ಇಲ್ಲಿ ಎಲ್ಲದಕ್ಕೂ ದುಡ್ಡು ಕೊಡಬೇಕು ಎಂದು ಹೇಳಿ ಆ್ಯಂಬುಲೆನ್ಸ್ ಸ್ಟಾರ್ಟ್ ಮಾಡಿ ಹೊರಡಲು ಮುಂದಾದ. ಆ ಯುವಕ ಮತ್ತೆ ಹೋಗಿ ಪೆÇಲೀಸರಿಗೆ ತಿಳಿಸ್ತೀನಿ ಎಂದು ಹೇಳಿದಾಗ, ನೀವು ಯಾರಿಗಾದರೂ ತಿಳಿಸ್ಕೊಳಿ. ನಾವೇನು ಹೆದರೊಲ್ಲ ಎಂದು ಹೇಳಿ ಯುವಕನನ್ನು ತಳ್ಳಿ ಹೊರಡಲು ಮುಂದಾದ.
ಇದಕ್ಕೂ ಮುನ್ನ ಆ್ಯಂಬುಲೆನ್ಸ್ನ ಹಣ ಪಾವತಿಸಲು ಯುವಕ ಮುಂದಾಗಿ ಬಿಲ್ ಕೇಳಿದ. ಆಯ್ತು… ನಿಮ್ ಹಣಕೊಡ್ತೀವಿ ಎಂದು ಹಣ ಎಣಿಸಿಕೊಟ್ಟು ಬಿಲ್ ಕೇಳಿದರೆ ಚಾಲಕನ ಹತ್ತಿರ ಸರಿಯಾದ ಬಿಲ್ಲೇ ಇರಲಿಲ್ಲ. ಹೇಗಿದೆ ನಮ್ಮ ವ್ಯವಸ್ಥೆ… ಹೀಗಿದೆ ಸುಲಿಗೆ….!
ಈ ಅನ್ಯಾಯ ಖಂಡಿಸಿದ ಈಯುವಕನಿಗೊಂದು ಸೆಲ್ಯೂಟ್..! ಇಂತಹ ಸಮಸ್ಯೆಗಳು ಒಂದು ತಾರ್ಕಿಕ ಅಂತ್ಯ ಕಾಣಬೇಕು. ಈ ಆ್ಯಂಬುಲೆನ್ಸ್ ಚಾಲಕನ ವಿರುದ್ಧ ದೂರು ಸಲ್ಲಿಸಿ ಕಾನೂನು ರೀತಿ ಕ್ರಮಕೈಗೊಳ್ಳಬೇಕು.