ಬೆಂಗಳೂರು, ಮಾ.10- ವೈದ್ಯಕೀಯ ಹಾಗೂ ಫಾರ್ಮಸಿ ಕಾಲೇಜುಗಳಲ್ಲಿ ಹೆಚ್ಚಿನ ಜನರಿಕ್ ಔಷಧಿ ಮಳಿಗೆಗಳನ್ನು ತೆರೆಯುವ ಮೂಲಕ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ Pಲ್ಪಿಸಬೇಕಾದ ತುರ್ತು ಅಗತ್ಯ ನಮ್ಮ ಮುಂದೆ ಇದೆ ಎಂದು ಮಣಿಪಾಲ್ ಅಕಾಡೆಮಿ ಉನ್ನತ ಶಿಕ್ಷಣ ವಿಭಾಗದ ನಿಕಟಪೂರ್ವ ಕುಲಪತಿ ಡಾ.ಎಚ್.ಶುಭಕೃಷ್ಣ ಬಲ್ಲಾಳ್ ಇಂದಿಲ್ಲಿ ಸಲಹೆ ನೀಡಿದ್ದಾರೆ.
ಕೆಂಪೇಗೌಡ ವೈದ್ಯಕೀಯ ವಿಜ್ಞಾನ ವಿಭಾಗದ (ಕಿಮ್ಸ್)ವತಿಯಿಂದ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ 2018ನೆ ಪದವಿ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಪದಕ ವಿತರಣೆ ಮಾಡಿ ಅವರು ಮಾನತಾಡಿದರು.
ಜನರಿಕ್ ಔಷಧಿ ಮಳಿಗೆಗಳನ್ನು ಹೆಚ್ಚು ಆರಂಭಿಸುವುದರಿಂದ ಖಾಸಗಿ ಲಾಬಿಯನ್ನು ತಡೆಗಟ್ಟಬಹುದು. ಅಲ್ಲದೆ, ಇಲ್ಲಿ ಕಡಿಮೆ ದರಕ್ಕೆ ಉತ್ತಮ ಗುಣಮಟ್ಟದ ಔಷಧಿಗಳು ಸಿಗುವುದರಿಂದ ಮಧ್ಯಮ ವರ್ಗಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಇತ್ತೀಚೆಗೆ ಜನರಿಕ್ ಔಷಧಿಮಳಿಗೆಗಳನ್ನು ಉತ್ತೇಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ರಾಜ್ಯ ಸರ್ಕಾರಗಳು ಕೂಡ ಇದಕ್ಕೆ ವಿಶೇಷ ಒತ್ತು ನೀಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಾವು ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದಲ್ಲಿ ಎಷ್ಟೇ ಮುಂದುವರೆದಿದ್ದರೂ ವೈದ್ಯಕೀಯ ಕೊರತೆಯನ್ನು ನೀಗಿಸಲು ಸಾಧ್ಯವಾಗುತ್ತಿಲ್ಲ. ವಿದೇಶದಲ್ಲಿ 1ಸಾವಿರ ಜನರಿಗೆ ಒಬ್ಬ ವೈದ್ಯರಿದ್ದರೆ, ನಮ್ಮಲ್ಲಿ ಪ್ರತಿ 2ಸಾವಿರ ಮಂದಿಗೆ ಒಬ್ಬ ವೈದ್ಯರು ಸಿಗುತ್ತಾರೆ. ಇದರಿಂದ ಎಲ್ಲರಿಗೂ ಗುಣಮಟ್ಟದ ಆರೋಗ್ಯವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ನಗರ ಪ್ರದೇಶಗಳನ್ನು ಹೊರತುಪಡಿಸಿದರೆ ಗ್ರಾಮೀಣ ಭಾಗಗಳಲ್ಲಿ ಆಸ್ಪತ್ರೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ವೈದ್ಯರು ಇಲ್ಲಿ ಸೇವೆ ಸಲ್ಲಿಸಲು ಮೀನಾಮೇಷ ಎಣಿಸುತ್ತಾರೆ. ಕನಿಷ್ಠ ಅಗತ್ಯತೆಗಳು ಇಲ್ಲದಿದ್ದರೆ ಉತ್ತಮ ಆರೋಗ್ಯ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನೀವು ನಿಮ್ಮ ಕೋರ್ಸ್‍ಗಳು ಮುಗಿದ ನಂತರ ನಗರ ಪ್ರದೇಶದಲ್ಲೇ ಸೇವೆ ಸಲ್ಲಿಸುವ ಮನೋಭಾವನೆಯನ್ನು ಬಿಟ್ಟುಬಿಡಬೇಕು. ಗ್ರಾಮೀಣ ಭಾಗದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಸೇವೆ ಸಲ್ಲಿಸಿ. ಸರ್ಕಾರಗಳು ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಿಗೆ ಹೆಚ್ಚು ಒತ್ತು ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಎಂಬಿಬಿಎಸ್ ಕೋರ್ಸ್ ಮುಗಿದ ತಕ್ಷಣ ನಾವು ಎಲ್ಲ ಮುಗಿಸಿದ್ದೇವೆ ಎಂಬ ಮನೋಭಾವ ಇಟ್ಟುಕೊಳ್ಳಬೇಡಿ, ಪ್ರತಿ ದಿನ ಒಂದಲ್ಲ ಒಂದು ಸಂಶೋಧನೆ ನಡೆಸಬೇಕಾದ ಅಗತ್ಯವಿದೆ. ಟೆಲಿ ಮಿಡಿಷನ್, ವಿಜ್ಞಾನ, ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳ ಅಗತ್ಯವಿದೆ. ಇದರಿಂದ ಅನೇಕ ಲಾಭಗಳು ಸಿಗುತ್ತವೆ ಎಂದು ಸಲಹೆ ನೀಡಿದರು.
ನಮ್ಮಲ್ಲಿ 10 ಲಕ್ಷ ವೈದ್ಯರು ಹಾಗೂ 7.50ಲಕ್ಷ ಆಯುಶ್ ವೈದ್ಯರಿದ್ದಾರೆ. ಅಮೆರಿಕದಲ್ಲಿ 40 ಸಾವಿರ, ಬ್ರಿಟನ್‍ನಲ್ಲಿ 20 ಸಾವಿರ ವೈದ್ಯರಿದ್ದಾರೆ. ನಮ್ಮಲ್ಲಿ ನಿರೀಕ್ಷೆಗೆ ತಕ್ಕಂತೆ ಮಾನವ ಸಂಪನ್ಮೂಲ ಬಳಕೆಯಾಗುತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ 315 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಅಲ್ಲದೆ, 26 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಇದೇ ಮೊದಲ ಬಾರಿಗೆ 5ಮಂದಿ ಸರ್ಜನ್‍ಗಳಿಗೂ ಸಹ ಪದಕ ನೀಡಿ ಸನ್ಮಾನಿಸಲಾಯಿತು.