ವಾಷಿಂಗ್ಟನ್, ಮಾ.9-ಆಫ್ಘಾನಿಸ್ತಾನ ಮೂಲದ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರಗಾಮಿ ಸಂಘಟನೆಯ ನಾಯಕ ಮೌಲಾನಾ ಫಜುಲ್ಲಾ ಬಂಧನಕ್ಕೆ ನೆರವಾಗುವ ಮಾಹಿತಿ ನೀಡುವವರಿಗೆ ಅಮೆರಿಕ ಇಂದು 5 ದಶಲಕ್ಷ ಡಾಲರ್ (32,54,87,500 ರೂ.ಗಳು) ಬಹುಮಾನ ಪ್ರಕಟಿಸಿದೆ.
ಪಾಕಿಸ್ತಾನ ಸೇರಿದಂತೆ ವಿವಿಧೆಡೆ ಭಯಾನಕ ದಾಳಿಗಳನ್ನು ನಡೆಸಿ ಅಪಾರ ಸಾವು-ನೋವಿಗೆ ಟಿಟಿಪಿ ಕಾರಣವಾಗಿದೆ.
ಮೌಲಾನಾ ಅಲ್ಲದೇ, ಜಮಾತ್ ಉಲ್ ಅಹ್ರಾರ್(ಜೆಯುಎ) ಮುಖಂಡ ಅಬ್ದುಲ್ ವಲಿ ಹಾಗೂ ಲಷ್ಕರ್-ಎ-ಇಸ್ಲಾಂ ನಾಯಕ ಮಂಗಲ್ ಬಾಗ್ ಬಗ್ಗೆ ಮಾಹಿತಿ ನೀಡಿದವರಿಗೂ ತಲಾ 3 ದಶಲಕ್ಷ ಡಾಲರ್ಗಳ(19,52,86,500 ರೂ.ಗಳು) ಇನಾಮು ಸಹ ಪ್ರಕಟಿಸಿದೆ.
ಈ ಮೊದಲು ಟಿಟಿಪಿ ಜೊತೆ ಇದ್ದ ಜೆಯುಎ ಭಯೋತ್ಪಾದಕ ಸಂಘಟನೆ ಪ್ರತ್ಯೇಕಗೊಂಡು ತನ್ನದೇ ಆದ ಬಣದ ಮೂಲಕ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದೆ. ಲಷ್ಕರ್-ಎ-ಇಸ್ಲಾಂ ಉಗ್ರರು ಪಾಕಿಸ್ತಾನದ ಖೈಬರ್ ಬುಡಕಟ್ಟು ಪ್ರದೇಶದಲ್ಲಿ ತನ್ನ ಹಿಂಸಾಕೃತ್ಯಗಳನ್ನು ಮುಂದುವರಿಸಿದೆ.