ಕೃಷಿ ಇಲಾಖೆ ಬೇಡಿಕೆ ಆಧರಿಸಿ ಇನ್ನೂ ಒಂದು ಲಕ್ಷ ಟನ್ ಗೊಬ್ಬರ ದಾಸ್ತಾನು: ಡಾ.ಎಂ.ಎನ್.ರಾಜೇಂದ್ರಕುಮಾರ್

ಕೃಷಿ ಇಲಾಖೆ ಬೇಡಿಕೆ ಆಧರಿಸಿ ಇನ್ನೂ ಒಂದು ಲಕ್ಷ ಟನ್ ಗೊಬ್ಬರ ದಾಸ್ತಾನು: ಡಾ.ಎಂ.ಎನ್.ರಾಜೇಂದ್ರಕುಮಾರ್
ಬೆಂಗಳೂರು, ಮಾ.9- ಮುಂದಿನ ಮುಂಗಾರು ಹಂಗಾಮಿಗೆ ರಸಗೊಬ್ಬರದ ಕೊರತೆಯಾಗದಂತೆ ಈಗಾಗಲೇ 1.30ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿ ದಾಸ್ತಾನು ಮಾಡಲಾಗಿದ್ದು, ಕೃಷಿ ಇಲಾಖೆ ಬೇಡಿಕೆ ಆಧರಿಸಿ ಇನ್ನೂ ಒಂದು ಲಕ್ಷ ಟನ್ ಗೊಬ್ಬರ ದಾಸ್ತಾನು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಮಂಡಳದ ವತಿಯಿಂದ ಇಲ್ಲಿಯವರೆಗೂ ಬೆಂಬಲಬೆಲೆಯಡಿ ಖರೀದಿಸಲಾದ ಕೃಷಿ ಉತ್ಪನ್ನಗಳ ಸಮಗ್ರ ವಿವರಣೆ ನೀಡಿದ ಅವರು, ತೊಗರಿ, ಕಡಲೆಕಾಳು, ರಾಗಿ ಮತ್ತಿತರರ ಉತ್ಪನ್ನಗಳನ್ನು ಖರೀದಿ ಮಾಡಲಾಗಿದೆ ಎಂದು ಹೇಳಿದರು.
ರಸಗೊಬ್ಬರದ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಹೊಸ ಕಾಯ್ದೆ ರೂಪಿಸಿ ಕೃಷಿ ಪದವೀಧರರಿರುವ ಅಂಗಡಿಗೆ ಮಾತ್ರ ರಸಗೊಬ್ಬರ ಮಾರುಕಟ್ಟೆ ಪರವಾನಗಿ ನೀಡುವುದಾಗಿ ಸುತ್ತೋಲೆ ಹೊರಡಿಸಿತ್ತು. ಅದರಿಂದ ಬಹಳಷ್ಟು ತೊಂದರೆಯಾಗಿತ್ತು. ಇತ್ತೀಚೆಗೆ ಕೇಂದ್ರ ಸರ್ಕಾರ ತನ್ನ ಆದೇಶವನ್ನು ಮಾರ್ಪಾಡು ಮಾಡಿ ಒಂದು ಸುತ್ತೋಲೆ ಹೊರಡಿಸಿದೆ.
ಅದರಂತೆ ಸಹಕಾರ ಸಂಘಗಳ ಅಧೀನದಲ್ಲಿರುವ ಮಾರಾಟ ಕೇಂದ್ರಗಳಲ್ಲಿ ಒಂದು ತಿಂಗಳ ತರಬೇತಿ ನೀಡಿ ಪರವಾನಗಿಯನ್ನು ನವೀಕರಿಸಬಹುದೆಂದು ಹೇಳಲಾಗಿದೆ. ಹೀಗಾಗಿ ಗೊಬ್ಬರ ಮಾರಾಟಗಾರರು ಸ್ವಲ್ಪ ಉಸಿರಾಡುವಂತಾಗಿದೆ ಎಂದು ಹೇಳಿದರು.
ಮಹಾಮಂಡಲ 1943ರಲ್ಲಿ ಸ್ಥಾಪನೆಗೊಂಡು ರೈತಪರವಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ನವೆಂಬರ್ ವೇಳೆಗೆ ಸಹಕಾರ ಮಹಾಮಂಡಳಕ್ಕೆ 70 ವರ್ಷ ತುಂಬಲಿದ್ದು, ಅದರ ಪ್ಲಾಟಿನ್‍ಂ ಜ್ಯೂಬಿಲಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಪ್ರತಿ ವರ್ಷ ಸರಿಸುಮಾರು ಒಂದು ಸಾವಿರ ಕೋಟಿಯಷ್ಟು ವಹಿವಾಟನ್ನು ಮಹಾ ಮಂಡಳ ಮಾಡುತ್ತಿದೆ. ಈ ವರ್ಷ ರಸಗೊಬ್ಬರ ಮಾರಾಟದಿಂದ ವಹಿವಾಟು ಹೆಚ್ಚಾಗಿದ್ದು, ಈ ವರ್ಷ ಸುಮಾರು ಎರಡೂವರೆ ಸಾವಿರ ಕೋಟಿಯಷ್ಟಾಗಬಹುದು. ಮಂಡಳ ಸುಮಾರು 32ರಿಂದ 35 ಕೋಟಿಯಷ್ಟು ಲಾಭಗಳಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ತೊಗರಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ನೆರವಾಗಲು ಬಾಗಲಕೋಟೆ, ಬೀದರ್, ಬೆಳಗಾವಿ, ಕಲಬುರ್ಗಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 386 ಖರೀದಿ ಕೇಂದ್ರಗಳನ್ನು ತೆರೆದು ಪ್ರತಿ ಕ್ವಿಂಟಾಲ್‍ಗೆ 5450ರೂ. ಬೆಂಬಲ ಬೆಲೆಯಂತೆ 3ಲಕ್ಷ ಟನ್ ತೊಗರಿ ಖರೀದಿ ಮಾಡಲಾಗುತ್ತಿದೆ. ರಾಜ್ಯದಲ್ಲಿ 12 ಲಕ್ಷ ಟನ್ ತೊಗರಿ ಬೆಳೆಯಲಾಗಿದ್ದು, 9 ಲಕ್ಷ ಟನ್ ದಾಸ್ತಾನು ಇದೆ. ಕೇಂದ್ರ ಸರ್ಕಾರ 3 ಲಕ್ಷ ಟನ್ ಖರೀದಿಗೆ ಮಾತ್ರ ಅನುಮತಿ ನೀಡಿದ್ದು, ಉಳಿದ ತೊಗರಿಯನ್ನು ಖರೀದಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿರುವುದಾಗಿ ಹೇಳಿದರು.
ಆನ್‍ಲೈನ್ ಮೂಲಕ ಸುಮಾರು 5ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಜತೆಗೆ ರಾಜ್ಯ ಸರ್ಕಾರ 550 ರೂ. ಪೆÇ್ರೀ ಧನ ನೀಡಿ ರೈತರಿಗೆ ನೆರವಾಗುತ್ತಿದೆ ಎಂದು ಅವರು ಹೇಳಿದರು.
ರೈತರಿಂದ ಸುಮಾರು 2.02ಲಕ್ಷ ಕಡಲೆಕಾಳು ಖರೀದಿಗೆ ಗುರಿ ನಿಗದಿಪಡಿಸಲಾಗಿದ್ದು, ಪ್ರತಿ ಕ್ವಿಂಟಾಲ್‍ಗೆ 7570ರೂ.ನಂತೆ ಪ್ರತಿ ರೈತರಿಂದ 15 ಕ್ವಿಂಟಾಲ್‍ವರೆಗೂ ಖರೀದಿ ಮಾಡಲಾಗುತ್ತಿದೆ. ಈವರೆಗೂ 99ಸಾವಿರ ಕ್ವಿಂಟಾಲ್ ಖರೀದಿಯಾಗಿದೆ. ವಿವಿಧ ಜಿಲ್ಲೆಗಳಲ್ಲಿ 296 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಹಾಮಂಡಳದ ವತಿಯಿಂದ ಹಾಸನ ಜಿಲ್ಲೆಯಲ್ಲಿ 39.134 ಕ್ವಿಂಟಾಲ್ ರಾಗಿಯನ್ನು ಖರೀದಿ ಮಾಡಲಾಗಿದೆ. 7 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 3578 ರೈತರು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
13ಸಾವಿರ ರೈತರಿಂದ 70 ಕೋಟಿ ಮೌಲ್ಯದ 1.70ಲಕ್ಷ ಕ್ವಿಂಟಾಲ್ ಉದ್ದು, 21.644 ರೈತರಿಗೆ 121 ಕೋಟಿ ಮೌಲ್ಯದ 2.17ಲಕ್ಷ ಕ್ವಿಂಟಾಲ್ ಹೆಸರುಕಾಳನ್ನು ಖರೀದಿ ಮಾಡಲಾಗಿದೆ ಎಂದು ವಿವರಿಸಿದರು.
ಆನ್‍ಲೈನ್‍ನಿಂದ ನೋಂದಣಿ ಮಾಡಿಕೊಂಡು ಕರಾರುವಕ್ಕಾಗಿ ರೈತರ ಖಾತೆಗೆ ನೇರವಾಗಿ ಹಣ ಪಾವತಿ ಮಾಡುತ್ತಿರುವುದರಿಂದ ಮಧ್ಯವರ್ತಿಗಳಿಗೆ ಇಲ್ಲಿ ಅವಕಾಶವಿಲ್ಲ ಎಂದು ರಾಜೇಂದ್ರಕುಮಾರ್ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ