ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ ಕುರಿತು ಕೇಂದ್ರಕ್ಕೆ ಶಿಫಾರಸು

ಬೆಂಗಳೂರು, ಮಾ.9-ಲಿಂಗಾಯತ ಪ್ರತ್ಯೇಕ ಧರ್ಮ ಸಂಬಂಧಿಸಿದಂತೆ ನಡೆದ ಚರ್ಚೆ ಅಪೂರ್ಣವಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಚರ್ಚಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಆದರೆ ಈ ಸಂಬಂಧ ಚರ್ಚೆ ವೇಳೆ ಯಾವುದೇ ವಾಗ್ವಾದ ನಡೆದಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ನ್ಯಾ.ನಾಗಮೋಹನ್‍ದಾಸ್ ಸಮಿತಿ ನೀಡಿರುವ ವರದಿ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ.ಆದರೆ ಮಾಧ್ಯಮಗಳಲ್ಲಿ ಪ್ರಕಟವಾದಂತೆ ಸಭೆಯಲ್ಲಿ ವಾಗ್ವಾದ ನಡೆದು ಸಚಿವರು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಕುರಿತಂತೆ ಸೌಹಾರ್ದಯುತವಾಗಿ ಹಾಗೂ ವಿಸ್ತೃತವಾಗಿ ಚರ್ಚೆ ನಡೆದಿದೆ. ಯಾರೂ ಸಹ ಏರುಧ್ವನಿಯಲ್ಲೂ ಮಾತನಾಡಿಲ್ಲ. ಈ ಕುರಿತಂತೆ ಸುಳ್ಳು ಸುದ್ದಿ ಪ್ರಕಟವಾಗಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ